ADVERTISEMENT

ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ತರಬೇತಿ ನೀಡಿದ್ದು ಕನ್ನಡಿಗ

ಗಣಪತಿ ಹೆಗಡೆ
Published 7 ಆಗಸ್ಟ್ 2021, 15:45 IST
Last Updated 7 ಆಗಸ್ಟ್ 2021, 15:45 IST
ತರಬೇತಿ ಅವಧಿಯಲ್ಲಿ ಕಾಶೀನಾಥ್‌ ನಾಯ್ಕ್ (ಎಡಬದಿ) ಹಾಗೂ ನೀರಜ್‌ ಚೋಪ್ರಾ
ತರಬೇತಿ ಅವಧಿಯಲ್ಲಿ ಕಾಶೀನಾಥ್‌ ನಾಯ್ಕ್ (ಎಡಬದಿ) ಹಾಗೂ ನೀರಜ್‌ ಚೋಪ್ರಾ   

ಶಿರಸಿ: ಟೋಕಿಯೊ ಒಲಿಂಪಿಕ್‍ನ ಜಾವೆಲಿನ್‌ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ ಅವರ ಸಾಧನೆಗೆ ಮುನ್ನುಡಿ ಬರೆಯುವಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಅಥ್ಲೆಟಿಕ್‌ ಕೋಚ್‌ ಕಾಶೀನಾಥ ನಾಯ್ಕ ಅವರ ಶ್ರಮ ಕೂಡ ಇದೆ.

ಭಾರತೀಯ ಸೈನ್ಯದಲ್ಲಿರುವ ನೀರಜ್ 2015 ರಿಂದ 2017ರ ಅವಧಿ ವರೆಗೆ ಪಟಿಯಾಲಾದಲ್ಲಿ ಜಾವೆಲಿನ್‌ ಎಸೆತದ ತರಬೇತಿ ಪಡೆದುಕೊಂಡಿದ್ದು ಕಾಶೀನಾಥ ಅವರಿಂದ. ಆಗ ಕಾಶೀನಾಥ ಭಾರತೀಯ ಅಥ್ಲೆಟಿಕ್ಸ್ ತಂಡದ ತರಬೇತುದಾರರಾಗಿದ್ದರು. ಈ ವೇಳೆ ಎರಡು ವರ್ಷಗಳ ಕಾಲ ನೀರಜ್‍ಗೆ ತರಬೇತಿ ನೀಡಿದ್ದ ಅವರು ಜಾವೆಲಿನ್‌ ಎಸೆತದ ಉತ್ಕೃಷ್ಟ ಕೌಶಲಗಳನ್ನು ಹೇಳಿಕೊಟ್ಟಿದ್ದರು.

ಪ್ರಸ್ತುತ ಪುಣೆ ಆರ್ಮಿ ಸ್ಪೋರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ ಕಾಶೀನಾಥ್‌ ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಸಂಭ್ರಮ ಹಂಚಿಕೊಂಡು ‘ನೀರಜ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಎರಡು ವರ್ಷ ತರಬೇತಿ ನೀಡಿದ್ದೆ ಎಂಬುದೇ ನನ್ನ ಪಾಲಿಗೆ ಹೆಮ್ಮೆಯ ವಿಷಯ’ ಎಂದರು.

ADVERTISEMENT

‘ಒಲಿಂಪಿಕ್‍ಗೆ ತೆರಳುವ ಎರಡು ತಿಂಗಳು ಮುನ್ನ ಪುಣೆಗೆ ಬಂದಿದ್ದ ನೀರಜ್ ಉತ್ತಮವಾಗಿ ಜಾವೆಲಿನ್‌ ಎಸೆತದ ಬಗ್ಗೆ ಕೌಶಲಗಳನ್ನು ಕೇಳಿದ್ದರು. ಅದಕ್ಕೂ ಮುನ್ನ ಅವರು ಸ್ವೀಡನ್‍ನಲ್ಲಿ ತರಬೇತಿ ಪಡೆದು ಬಂದಿದ್ದರು. ಪ್ರತಿ ಹಂತದಲ್ಲೂ ಮತ್ತಷ್ಟು ದೂರ ಎಸೆಯುವ ಬಗ್ಗೆ ತಿಳಿಹೇಳಿದ್ದೆ. ಅಂತಿಮ ಘಟ್ಟಕ್ಕೆ ತಲುಪುತ್ತಿದ್ದಾಗಲೆ ಪದಕ ಗೆಲ್ಲುತ್ತಾನೆ ಎನ್ನುವ ಭರವಸೆ ನನಗಿತ್ತು. ಅಥ್ಲೆಟಿಕ್ಸ್‌ನಲ್ಲಿ ಪದಕದ ಕೊರತೆ ನೀಗಿಸಿದ್ದು ದೊಡ್ಡ ಖುಷಿ ನೀಡಿದೆ’ ಎಂದರು.

‘ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಸಾಧನೆ ಐತಿಹಾಸಿಕ ಕ್ಷಣ. ನೀರಜ್ ನನ್ನ ಬಳಿ ಕಲಿತಿದ್ದ ಎಂಬುದೇ ನನ್ನ ಪಾಲಿಗೆ ದೊಡ್ಡ ಹೆಮ್ಮೆ’ ಎಂದರು.

ಕಾಶೀನಾಥ 2010ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು. 2019ರ ಬಳಿಕ ಪುಣೆಯಲ್ಲಿ ತರಬೇತುದಾರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.