ADVERTISEMENT

ಕಾರವಾರ | ಹೆದ್ದಾರಿ ಟೋಲ್ ಸಂಗ್ರಹ ಕಾನೂನುಬಾಹಿರ: ಶಾಸಕ ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 13:37 IST
Last Updated 15 ಜುಲೈ 2023, 13:37 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಕಾರವಾರ: ‘ಗುಣಮಟ್ಟದ ಕೆಲಸವನ್ನೂ ಮಾಡದೆ, ಕಾಮಗಾರಿ ಪೂರ್ಣಗೊಳಿಸದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಸಂಗ್ರಹ ನಡೆಸಲಾಗುತ್ತಿರುವುದು ಕಾನೂನು ಬಾಹಿರ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಆದೇಶಿಸಬೇಕು’ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

‘ಟೆಂಡರ್ ಒಡಂಬಡಿಕೆ ಪ್ರಕಾರ ಇಷ್ಟರೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಒಡಂಬಡಿಕೆ ನಿಯಮ ಮುರಿದ ಕಾರಣ ಟೋಲ್ ಸಂಗ್ರಹ ಸ್ಥಗಿತಗೊಳಿಸಲೇಬೇಕು. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರವನ್ನೂ ಬರೆಯುತ್ತೇನೆ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯ ಘಟ್ಟದ ಮೇಲಿನ ಭಾಗದಲ್ಲಿ ಮಳೆ ಕೊರತೆಯಿಂದ, ಕರಾವಳಿ ಭಾಗದಲ್ಲಿ ಅತಿವೃಷ್ಟಿಯಿಂದ ಆಸ್ತಿಪಾಸ್ತಿ, ಕೃಷಿ ಬೆಳೆ ಹಾನಿಗೀಡಾಗಿದೆ. ಈ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆಗೆ ಕ್ರಮ ಜರುಗಿಸಬೇಕು ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದರು.

ADVERTISEMENT

‘ಜೊಯಿಡಾ ಅಣಶಿ ಭಾಗದಲ್ಲಿ ಅರಣ್ಯ ಇಲಾಖೆಯವರು ಅಡಿಕೆ ತೋಟ ನಾಶ ಪಡಿಸಿದ ಕ್ರಮ ಸರಿಯಲ್ಲ. ಈ ಬಗ್ಗೆ ಅಲ್ಲಿನ ವಲಯ ಅರಣ್ಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.

‘ಮುಡಗೇರಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಭೂಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಿಲ್ಲ. ಚುನಾವಣೆ ಹೊತ್ತಲ್ಲಿ ಬಿಜೆಪಿಯವರು ಪ್ರಚಾರಕ್ಕೆ ಚೆಕ್ ನೀಡಿದ್ದರು. ಆದರೆ ಈವರೆಗೆ ಪರಿಹಾರ ತಲುಪಿಲ್ಲ’ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್, ಪ್ರಮುಖರಾದ ರಮಾನಂದ ನಾಯಕ, ಕೆ.ಎಚ್.ಗೌಡ, ಸಮೀರ ನಾಯ್ಕ, ಕೆ.ಶಂಭು ಶೆಟ್ಟಿ, ಪಾಂಡುರಂಗ ಗೌಡ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.