ADVERTISEMENT

ಕಾರವಾರ: ತೆರಿಗೆ ಸಂಗ್ರಹದಲ್ಲಿ ಶೇ 100ರ ಸಾಧನೆ

ಗ್ರಾಮ ಪಂಚಾಯಿತಿಗಳಲ್ಲಿ ಬಾಕಿಯಿದ್ದ ಕರ ವಸೂಲಿಯಲ್ಲಿ ಶೇ 81ರಷ್ಟು ಪ್ರಗತಿ

ಸದಾಶಿವ ಎಂ.ಎಸ್‌.
Published 26 ಜೂನ್ 2020, 19:30 IST
Last Updated 26 ಜೂನ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರವಾರ: ಜಿಲ್ಲೆಯಲ್ಲಿ 2019– 20ನೇ ಸಾಲಿನಲ್ಲಿ ಗ್ರಾಮ ಪಂಚಾಯ್ತಿಗಳಿಂದ ಶೇ 100 ತೆರಿಗೆ ಸಂಗ್ರಹವಾಗಿದೆ. ಕೆಲವು ವರ್ಷಗಳಿಂದ ಬಾಕಿಯಾಗಿದ್ದ ತೆರಿಗೆ ವಸೂಲಿಯಲ್ಲೂ ಶೇ 81ರಷ್ಟು ಸಾಧನೆಯಾಗಿರುವುದು ರಾಜ್ಯದ ಗಮನ ಸೆಳೆದಿದೆ.

ಆಸ್ತಿ ತೆರಿಗೆಯೂ ಸೇರಿದಂತೆ ವಿವಿಧ ಸಂಪನ್ಮೂಲಗಳ ಸಂಗ್ರಹಣೆಯ ಬಗ್ಗೆ ಈ ಬಾರಿ ಚುರುಕಾಗಿ ಕೆಲಸ ಮಾಡಿರುವುದು ವಿಶೇಷವಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ ಖಾಸಗಿ ಕಟ್ಟಡ, ಮನೆಗಳಿಗೆ ವರ್ಷವೂ ಕರ ಪಾವತಿ ಮಾಡಬೇಕು. ಧಾರ್ಮಿಕ ತಾಣ, ಸರ್ಕಾರಿ ಕಟ್ಟಡಗಳನ್ನು ಇದರಿಂದ ಹೊರಗಿಡಲಾಗಿದೆ.

ಗ್ರಾಮ ಪಂಚಾಯ್ತಿಗಳಿಗೆ ನೀರಿನ ತೆರಿಗೆ, ಜಾಹೀರಾತು ಫಲಕಗಳ ಅಳವಡಿಕೆ ಮುಂತಾದ ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣವಾಗುತ್ತದೆ. ಗ್ರಾಮದ ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆಗೆ ಇವುಗಳೇ ಹಣದ ಮೂಲವಾಗಿವೆ. ಹಿಂದಿನ ತೆರಿಗೆ ವಸೂಲಿಯಲ್ಲಿಪ್ರತಿ ವರ್ಷಶೇ 70ರಷ್ಟು ಕರ ಸಂಗ್ರಹಣೆಯ ಗುರಿಯನ್ನು ತಲುಪಲೂಗ್ರಾಮ ಪಂಚಾಯ್ತಿಗಳಿಗೆ ಕಷ್ಟವಾಗುತ್ತಿತ್ತು. ಆದರೆ, ಈ ಬಾರಿ ಗಣನೀಯವಾಗಿ ಏರಿಕೆ ಕಂಡಿದೆ.

ADVERTISEMENT

ಈ ವರ್ಷದ ತೆರಿಗೆ ಸಂಗ್ರಹ ಹಾಗೂ ಹಿಂದಿನ ಬಾಕಿಯನ್ನು ವಸೂಲಿ ಮಾಡುವ ಬಗ್ಗೆ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಸ್ಪಷ್ಟವಾದ ಸೂಚನೆ ನೀಡಲಾಗಿತ್ತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ನಿಗದಿತ ಅವಧಿಯಲ್ಲಿಪ್ರತಿ ಗ್ರಾಮ ಪಂಚಾಯ್ತಿಗಳಿಂದ ಪ್ರಗತಿಯ ವರದಿ ತರಿಸಿಕೊಂಡು ಪರಿಶೀಲಿಸುತ್ತಿದ್ದರು. ಇದರಿಂದ ಎಚ್ಚೆತ್ತುಕೊಂಡು ಗ್ರಾಮ ಪಂಚಾಯ್ತಿ ಸಿಬ್ಬಂದಿ ಈ ವರ್ಷ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿ ಶೇ 100ರ ಸಾಧನೆ ಮಾಡಿದರು.

‘ಒತ್ತಡ ಅನಿವಾರ್ಯ’:‘ಸಾರ್ವಜನಿಕರು ನಿಯಮ ಪ್ರಕಾರ ಭರಿಸಬೇಕಾದ ತೆರಿಗೆಯನ್ನುಗ್ರಾಮ ಪಂಚಾಯ್ತಿಗಳಿಗೆ ಪಾವತಿಸಬೇಕು. ಗ್ರಾಮ ಪಂಚಾಯ್ತಿಗಳೂ ಈ ವಿಚಾರದಲ್ಲಿ ಅಸಡ್ಡೆ ತೋರದಂತೆ ಪದೇಪದೇ ಎಚ್ಚರಿಕೆ ನೀಡುತ್ತಿದ್ದೆ.ಇದೇ ಮೊತ್ತದಿಂದಲೇ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಗಳ, ಕಾಮಗಾರಿಗಳ ನಿರ್ವಹಣೆ ಆಗಬೇಕಿದೆ. ಆದ್ದರಿಂದ ಈ ಒತ್ತಡ ಅನಿವಾರ್ಯವೂ ಆಗಿದೆ. ಇದೇ ಮಾದರಿಯಲ್ಲಿ ನಿರಂತರವಾಗಿ ಕೆಲಸ ಸಾಗಬೇಕಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ಅಭಿಪ್ರಾಯ ವ್ಯಕ್ತಪಡಿಸಿದರು.

ತೆರಿಗೆ ಸಂಗ್ರಹ

231- ಜಿಲ್ಲೆಯಲ್ಲಿ ಗ್ರಾ.ಪಂ.ಗಳು

₹9.71- ಕೋಟಿ2019–20ಕ್ಕೆತೆರಿಗೆಸಂಗ್ರಹಣೆಯ ಗುರಿ

₹ 9.70- ಕೋಟಿಸಂಗ್ರಹವಾದ ಒಟ್ಟುತೆರಿಗೆಯ ಮೊತ್ತ

₹11.99- ಕೋಟಿಒಟ್ಟಾರೆ ಬೇಡಿಕೆಯ ಮೊತ್ತ

* ಆಧಾರ: ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.