ADVERTISEMENT

ಬಿಜೆಪಿ ಸದಸ್ಯರಿಂದ ತಪ್ಪು ಮಾಹಿತಿ

ಜಿ ಪ್ಲಸ್ 2 ಮನೆ ನಿರ್ಮಾಣ: ಶಾಸಕ ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:36 IST
Last Updated 2 ಮಾರ್ಚ್ 2021, 4:36 IST
ಹಳಿಯಾಳದ ಹೊರವಲಯದಲ್ಲಿರುವ ಜಿ ಪ್ಲಸ್‌ 2 ಫಲಾನುಭವಿಗಳ ಕುಂದು ಕೊರತೆಯ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು
ಹಳಿಯಾಳದ ಹೊರವಲಯದಲ್ಲಿರುವ ಜಿ ಪ್ಲಸ್‌ 2 ಫಲಾನುಭವಿಗಳ ಕುಂದು ಕೊರತೆಯ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು   

ಹಳಿಯಾಳ: ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಜಿ ಪ್ಲಸ್ 2 ಮನೆಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಬಿಜೆಪಿ ಸದಸ್ಯರು ರಾಜಕೀಯ ದುರುದ್ದೇಶದಿಂದ ತಪ್ಪು ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಸೋಮವಾರ ಇಲ್ಲಿನ ಜಿ ಪ್ಲಸ್ 2 ಮನೆಗಳ ನಿರ್ಮಾಣ ಕಾಮಗಾರಿ ಸ್ಥಳದಲ್ಲಿಯೇ ಆಶ್ರಯ ಕಮಿಟಿಯ ಸಭೆ ಹಾಗೂ ಜಿ ಪ್ಲಸ್ 2 ಫಲಾನುಭವಿಗಳ ಜೊತೆ ಸಂವಾದ ನಡೆಸಿ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದರು.

ಹಳಿಯಾಳ ಪಟ್ಟಣದಲ್ಲಿ 504 ಜಿ ಪ್ಲಸ್ 2 ಮನೆಗಳ ನಿರ್ಮಾಣಕ್ಕೆ ಮಾರ್ಚ್ 2017 ರಂದು ಕೇಂದ್ರ ಸರ್ಕಾರದಿಂದ ರಾಜ್ಯ ಸರಕಾರಕ್ಕೆ ಮಂಜೂರಾತಿ ಆದೇಶ ಬಂದಿದೆ. ರಾಜ್ಯ ಸರ್ಕಾರದಿಂದ 2018 ಡಿಸೆಂಬರ್‌ ತಿಂಗಳಲ್ಲಿ ಮೊದಲನೇ ಹಂತದ 240 ಮನೆಗಳ ನಿರ್ಮಾಣ ಕಾರ್ಯಕ್ಕೆ ಆದೇಶ ವಾಗಿದೆ. ಈಗಾಗಲೇ ಮನೆಗಳು ನಿರ್ಮಾಣ ಸಹ ಆಗಿದ್ದು, ಎಲ್ಲ ಫಲಾನುಭವಿಗಳು ತಮ್ಮ ವಂತಿಕೆಯನ್ನು ನಿಗದಿತ ಸಮಯಕ್ಕೆ ಭರಣ ಮಾಡಿದ್ದಲ್ಲಿ ಪೂರ್ಣ ಪ್ರಮಾಣದ ಮನೆ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ADVERTISEMENT

240 ಮನೆಗಳಿಗೆ ಅರ್ಜಿ ಸಲ್ಲಿಸಿದವ ವಿವರ ಹಾಗೂ ಹಣ ಪಾವತಿಯ ಮಾಹಿತಿಯನ್ನು 3 ದಿನಗಳ ಒಳಗೆ ನೀಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಈಗಾಗಲೇ ಕೆಲವು ಫಲಾನುಭವಿಗಳು ಕೆ. ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಬ್ಯಾಂಕ್ ಗೆ ಪಿಗ್ಮಿ ಖಾತೆಯನ್ನು ತೆರೆದು ಅಲ್ಲಿಂದ ಸಾಲವನ್ನು ಮಾಡಿ ಜಿ ಪ್ಲಸ್ 2 ಮನೆಗೆ ವಂತಿಗೆ ಭರಣ ಮಾಡುತ್ತಿದ್ದು, ಅದರ ಸಾಲದ ಬಡ್ಡಿ ದರ ಶೇ13.50 ಆಗುತ್ತದೆ ಎಂದು ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸಚಿವರಾದ ಶಿವರಾಮ ಹೆಬ್ಬಾರ ಅವರಿಗೆ ಸಾಲದ ಬಡ್ಡಿ ದರವನ್ನು ಕಡಿಮೆ ಮಾಡಲು ತಿಳಿಸಲಾಗಿದೆ ಎಂದರು.

ಟೀಕಾಕಾರರಿಗೆ ಎಚ್ಚರಿಕೆ: ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೆಲವು ಮುಖಂಡರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಆಧಾರವಿಲ್ಲದ ಟೀಕೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ. ರಾಜಕೀಯವನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಮಾಡಬೇಕು. ಆ ನಂತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸಬೇಕು ಎಂದರು.

ದಾಂಡೇಲಿಯಲ್ಲಿ ನೂತನವಾಗಿ 1100 ಮನೆ ಮಂಜೂರಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಇಡೀ ರಾಜ್ಯದಲ್ಲಿ ಹಳಿಯಾಳದಲ್ಲಿ ಅತಿ ಹೆಚ್ಚಿನ 4000 ಕ್ಕೂ ಅಧಿಕ ಆಶ್ರಯ ಮನೆಗಳನ್ನು ವಿತರಣೆ ಮಾಡಿದ್ದೇವೆ. ಇಲ್ಲಿನ ಕೆಲ ಮುಖಂಡರು ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಜಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಾಮರ್ಥ್ಯವಿದ್ದರೆ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬರಲಿ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸಲಿ ಎಂದರು.

ಪುರಸಭೆ ಅಧ್ಯಕ್ಷ ಅಜರ ಬಸರಿಕಟ್ಟಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಮುಖ್ಯಾಧಿಕಾರಿ ಕೇಶವ ಚೌಗುಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.