ADVERTISEMENT

ಗೋಕರ್ಣ | ವರ್ಷಾಂತ್ಯದಲ್ಲಿ ಹೆಚ್ಚಿದ ಪ್ರವಾಸಿಗರು: ಸಂಚಾರ ದಟ್ಟಣೆಗೆ ಜನ ಹೈರಾಣ

ರವಿ ಸೂರಿ
Published 25 ಡಿಸೆಂಬರ್ 2024, 5:38 IST
Last Updated 25 ಡಿಸೆಂಬರ್ 2024, 5:38 IST
ಗೋಕರ್ಣದ ಮುಖ್ಯ ದೇವಸ್ಥಾನದ ಎದುರು ವಾಹನ ದಟ್ಟಣೆ ಉಂಟಾಗಿತ್ತು
ಗೋಕರ್ಣದ ಮುಖ್ಯ ದೇವಸ್ಥಾನದ ಎದುರು ವಾಹನ ದಟ್ಟಣೆ ಉಂಟಾಗಿತ್ತು   

ಗೋಕರ್ಣ: ವರ್ಷಾಂತ್ಯ ಸಮೀಪಿಸಿರುವ ಜೊತೆಗೆ ಕ್ರಿಸ್‍ಮಸ್ ರಜೆ ಕಾರಣಕ್ಕೆ ಗೋಕರ್ಣಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ವಾಹನ ದಟ್ಟಣೆಯಿಂದ ಇಲ್ಲಿಯ ಜನರು ಹೈರಾಣಾಗಿದ್ದಾರೆ.

ವಾಹನ ನಿಲುಗಡೆ ವ್ಯವಸ್ಥೆ ಮುಖ್ಯ ಕಡಲತೀರದಲ್ಲಿ (ಮೇನ್ ಬೀಚ್) ಕಲ್ಪಿಸಿರುವ ಕಾರಣ ವಾಹನಗಳು ದೇವಸ್ಥಾನದ ಎದುರಿನಿಂದಲೇ ಹಾದು ಹೋಗಬೇಕಿದೆ. ಕಡಲತೀರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಣೆಗೊಳಿಸುವ ಯೋಜನೆಯನ್ನು ಕುಮಟಾದ ಈ ಹಿಂದಿನ ಉಪವಿಭಾಗಾಧಿಕಾರಿ ರೂಪಿಸಿದ್ದರು. ಆದರೆ, ಅವರ ವರ್ಗಾವಣೆ ಬಳಿಕ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಮಹಾಬಲೇಶ್ವರ ದೇವಸ್ಥಾನ, ಮಹಾಗಣಪತಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಜೊತೆಗೆ ಕಡಲತೀರದಲ್ಲಿರುವ ರೆಸಾರ್ಟ್, ಹೋಮ್ ಸ್ಟೇಗಳಿಗೂ ವ್ಯಾಪಕ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ವಾಹನದ ನಡುವೆಯೇ ರಥಬೀದಿಯಲ್ಲಿ ಪಾದಚಾರಿಗಳು ಸಾಗಬೇಕಾಗಿದ್ದು, ದಟ್ಟಣೆಯಿಂದ ವೃದ್ಧರು ಮತ್ತು ಮಕ್ಕಳು ಸಾಗುವುದು ಸಮಸ್ಯೆಯಾಗಿದೆ.

ADVERTISEMENT

‘ದೇವಸ್ಥಾನದ 100 ಮೀಟರ್ ಅಂತರದಲ್ಲಿ ವಾಹನ ನಿರ್ಬಂಧಿಸುವುದು ಸೂಕ್ತ. ವಾಹನ ದಟ್ಟಣೆಯಿಂದ ಜನರು ತೊಂದರೆಗೆ ಒಳಗಾಗುವುದಲ್ಲದೆ, ಅಪಘಾತ ಉಂಟಾಗುವ ಆತಂಕವೂ ಹೆಚ್ಚು. ಕೆಲವರಂತೂ ವಾಹನ ಮೈಮೇಲೆ ಚಲಾಯಿಸುವಂತೆ ರಭಸದಲ್ಲಿ ಚಲಾಯಿಸಿಕೊಂಡು ಬರುತ್ತಾರೆ’ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ಸುರೆ ದೂರಿದರು.

‘2013ರ ಜನವರಿಯಲ್ಲಿ ಆಗಿನ ಜಿಲ್ಲಾಧಿಕಾರಿ ಗೋಕರ್ಣದಲ್ಲಿ ಇಕ್ಕಟಾದ ರಸ್ತೆ ಇರುವುದರಿಂದ ಪಾದಾಚಾರಿಗಳಿಗೆ ಮತ್ತು ವಾಹನ ಓಡಾಟಕ್ಕೆ ತುಂಬಾ ತೊಂದರೆಯಾಗುವುದನ್ನು ತಪ್ಪಿಸಲು ಏಕಮುಖ ಸಂಚಾರಕ್ಕೆ ಆದೇಶಿಸಿದ್ದರು. ಮೇಲಿನಕೇರಿ ಮಾರುತಿ ಕಟ್ಟೆಯಿಂದ ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯಿಂದ ಹಾದು ಹೋಗಿ, ಸುಭಾಷ್ ಸರ್ಕಲ್ ನಿಂದ ಓಂ ಹೊಟೆಲ್ ಮಾರ್ಗವಾಗಿ ಮಾರುತಿ ಕಟ್ಟೆಯವರೆಗೆ ಏಕಮುಖ ಸಂಚಾರವಾಗಿ ವಾಹನಗಳು ಚಲಿಸುವಂತೆ ಪ್ರತಿಬಂಧಿಸಿ ಆದೇಶ ಜಾರಿಗೊಳಿಸಿದ್ದರು. ಆದೇಶ ಸರಿಯಾಗಿ ಪಾಲನೆ ಆಗುತ್ತಿಲ್ಲ’ ಎಂದು ಸ್ಥಳಿಯರೊಬ್ಬರು ದೂರಿದರು.

‘ಪೊಲೀಸರು ಕಾವಲಿಗಿದ್ದರೆ ಮಾತ್ರ ನಿಯಮ ಪಾಲನೆ ಆಗುತ್ತಿದೆ. ಉಳಿದ ಸಮಯದಲ್ಲಿ ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಕಂಡ ಕಂಡಲ್ಲಿ ವಾಹನ ನಿಲ್ಲಿಸುವುದೂ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಸ್ಥಳೀಯ ಆಡಳಿತ ಸೂಕ್ತ ಸ್ಥಳದಲ್ಲಿ ಫಲಕಗಳನ್ನೂ ಅಳವಡಿಸಿಲ್ಲ. ಕೆಲವೊಮ್ಮೆ ಗಣ್ಯರು, ಅಧಿಕಾರಿಗಳು, ರಾಜಕೀಯ ನಾಯಕರು ದೇವರ ದರ್ಶನಕ್ಕೆ ಬಂದ ವೇಳೆ ವಾಹನ ರಸ್ತೆಯಲ್ಲೇ ನಿಲುಗಡೆ ಮಾಡಿ ನಿಯಮ ಉಲ್ಲಂಘಿಸಲಾಗುತ್ತಿದೆ’ ಎಂದೂ ದೂರಿದರು.

ಗೋಕರ್ಣದ ರಥಬೀದಿಯಲ್ಲಿ ವಾಹನಗಳ ದಟ್ಟಣೆ ಉಂಟಾಗಿರುವುದು..  
ಏಕಮುಖ ಸಂಚಾರ ವ್ಯವಸ್ಥೆ ಸರಿಯಾಗಿ ಜಾರಿಯಲ್ಲಿದೆ. ಸಂಚಾರ ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ ಕೆಲವೊಮ್ಮೆ ವಾಹನ ಬೇಕಾಬಿಟ್ಟಿ ನಿಲುಗಡೆ ಮಾಡುವ ಕಾರಣದಿಂದ ವಾಹನ ದಟ್ಟಣೆ ಉಂಟಾಗುತ್ತಿದೆ
ವಸಂತ ಆಚಾರ್ ಗೋಕರ್ಣ ಠಾಣೆ ಪೊಲೀಸ್ ನಿರೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.