ADVERTISEMENT

ಕಾರವಾರ: ಇದ್ದೂ ಇಲ್ಲದಂತಾದ ಟುಪಲೇವ್ ಯುದ್ಧ ವಿಮಾನ

ಗಣಪತಿ ಹೆಗಡೆ
Published 30 ಮಾರ್ಚ್ 2025, 6:13 IST
Last Updated 30 ಮಾರ್ಚ್ 2025, 6:13 IST
ಕಾರವಾರದಲ್ಲಿರುವ ಟುಪಲೇವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ವೀಕ್ಷಿಸಲಾಗದೆ ಬೇಸರದಿಂದ ಮರಳುತ್ತಿರುವ ಪ್ರವಾಸಿಗರು
ಕಾರವಾರದಲ್ಲಿರುವ ಟುಪಲೇವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ವೀಕ್ಷಿಸಲಾಗದೆ ಬೇಸರದಿಂದ ಮರಳುತ್ತಿರುವ ಪ್ರವಾಸಿಗರು   

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ವರ್ಷದ ಹಿಂದೆ ನೆಲೆನಿಂತ ‘ಟುಪಲೇವ್’ (143–ಎಂ) ಯುದ್ಧವಿಮಾನ ವಸ್ತು ಸಂಗ್ರಹಾಲಯ ಸಾರ್ವಜನಿಕ ವೀಕ್ಷಣೆಗೆ ಲಭಿಸದೆ ಐದೂವರೆ ತಿಂಗಳು ಕಳೆದಿದೆ.

ರಾಷ್ಟ್ರೀಯ ಹೆದ್ದಾರಿ–66ರ ಅಂಚಿನಲ್ಲೇ ಇರುವ ಕಾರಣದಿಂದ ಪ್ರವಾಸಿಗರನ್ನು ಯುದ್ಧವಿಮಾನವು ಸೆಳೆಯುತ್ತಿದೆ. ವಿಮಾನ ಏರಿ ಕಣ್ತುಂಬಿಕೊಳ್ಳುವ ಹಂಬಲದೊಂದಿಗೆ ಬರುವ ಪ್ರವಾಸಿಗರು ಮುಚ್ಚಿದ ಬಾಗಿಲು ಗಮನಿಸಿ ಬೇಸರದಿಂದ ಮರಳುತ್ತಿದ್ದಾರೆ. ನಿತ್ಯ ಹತ್ತಾರು ಪ್ರವಾಸಿಗರು ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸಾಗುತ್ತಿದ್ದಾರೆ.

ಭಾರತೀಯ ವಾಯುಸೇನೆಯಲ್ಲಿ ಬಳಕೆಯಾಗಿದ್ದ ರಷ್ಯಾ ನಿರ್ಮಿತ ಯುದ್ಧವಿಮಾನವು ನಿವೃತ್ತಿಯಾದ ಬಳಿಕ 2023ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಅರಕ್ಕೋಣಮ್‍ ವಾಯುನೆಲೆಯಿಂದ ಕಾರವಾರಕ್ಕೆ ಕರೆತರಲಾಗಿತ್ತು. ಎಂಟು ತಿಂಗಳ ಕಾಲ ವಿಮಾನದ ಮರುಜೋಡಣೆ ಕಾರ್ಯ ನಡೆಯಿತು. 2024ರ ಜೂನ್ 29 ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ನಾಲ್ಕು ತಿಂಗಳ ಕಾಲ 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಯುದ್ಧವಿಮಾನ ವೀಕ್ಷಿಸಿದ್ದರು.

ADVERTISEMENT

ಆದರೆ, ಅ.17 ರಂದು ತಾಂತ್ರಿಕ ಕಾರಣದ ನೆಪವೊಡ್ಡಿ ಪ್ರವಾಸೋದ್ಯಮ ಇಲಾಖೆಯು ವಿಮಾನ ವೀಕ್ಷಣೆ ಅವಕಾಶವನ್ನ ಸ್ಥಗಿತಗೊಳಿಸಿತ್ತು. ದಸರಾ ರಜೆಯ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರೂ ವಿಮಾನ ವೀಕ್ಷಿಸಲಾಗದೆ ತೆರಳಿದ್ದರು. ಯುದ್ಧವಿಮಾನ ವೀಕ್ಷಣೆ ಸ್ಥಗಿತಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಸೆಳೆದರೂ ಸ್ಪಂದಿಸದ ದೂರು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.

‘ಯುದ್ಧವಿಮಾನ ವಸ್ತುಸಂಗ್ರಹಾಲಯ ಸ್ಥಾಪನೆಯಾಗಿದ್ದನ್ನು ತಿಳಿದು ಕುತೂಹಲದೊಂದಿಗೆ ವೀಕ್ಷಿಸಲು ಬಂದರೆ ಮುಚ್ಚಿದ ಬಾಗಿಲು ಮಾತ್ರ ಕಾಣಿಸುತ್ತಿದೆ. ವಿಮಾನವನ್ನು ಹೊರಗಿನಿಂದ ಮಾತ್ರ ನೋಡಿಕೊಂಡು ಹೋಗುವಂತಾಗಿದೆ. ಕೋಟ್ಯಂತರ ವೆಚ್ಚ ಮಾಡಿ ಸ್ಥಾಪಿಸಿದ ಯುದ್ಧ ವಿಮಾನ ನೋಡಲು ಜನರಿಗೆ ಅವಕಾಶ ಮಾಡಿಕೊಡದಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಮಹಾರಾಷ್ಟ್ರದ ಸತಾರಾದಿಂದ ಬಂದಿದ್ದ ಪ್ರವಾಸಿಗ ಆಕಾಶ ಸಬ್ಲೆ ಹೇಳಿದರು.

ಟುಪಲೇವ್ ಯುದ್ಧವಿಮಾನದ ಮೇಲ್ಮೈಗೆ ಕೆಸರು ಮೆತ್ತಿಕೊಂಡಿರುವುದು
ಹವಾನಿಯಂತ್ರಕ ವ್ಯವಸ್ಥೆ ಬೆಳಕಿನ ವ್ಯವಸ್ಥೆಗೆ ನೀಡಲಾದ ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂನಿಂದ ಸುರಕ್ಷತಾ ಪ್ರಮಾಣ ಪತ್ರ ಲಭಿಸುವುದು ಬಾಕಿ ಇದೆ. ಒಂದೆರಡು ದಿನದೊಳಗೆ ಪತ್ರ ಸಿಗಲಿದ್ದು ಆ ಬಳಿಕ ಸಾರ್ವಜನಿಕ ಯುದ್ಧ ವಿಮಾನ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ
ಮಂಜುನಾಥ ನಾವಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ
ವಿಮಾನಕ್ಕೆ ಮೆತ್ತಿದ ಕೆಸರು
ಬಿಸಿಲಿಗೆ ಹೊಳೆಯುತ್ತಿದ್ದ ಟುಪಲೇವ್ ಯುದ್ಧ ವಿಮಾನದ ಮೇಲ್ಮೈ ಈಗ ಕೆಂಬಣ್ಣಕ್ಕೆ ತಿರುಗಿದೆ. ಧೂಳು ಈಚೆಗೆ ಸುರಿದ ಮಳೆಯಿಂದ ಮೆತ್ತಿದ ಕೆಸರು ಇದಕ್ಕೆ ಕಾರಣವಾಗಿದೆ. 56 ಮೀಟರ್‌ನಷ್ಟು ಉದ್ದ 34 ಮೀಟರ್‌ದಷ್ಟು ಅಗಲವಿರುವ ಯುದ್ಧ ವಿಮಾನ ಶುಚಿಗೊಳಿಸುವುದು ಸಿಬ್ಬಂದಿಗೆ ಸವಾಲಾಗಿದೆ. ವಿಮಾನದ ಮೇಲ್ಮೈ ಪೂರ್ತಿಯಾಗಿ ತೊಳೆಯಲು ಪೂರಕವಾದ ಯಂತ್ರದ ಲಭ್ಯತೆ ಇಲ್ಲ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹೇಳುತ್ತಾರೆ. ‘ವಿಮಾನದ ಮೇಲ್ಮೈ ಶುಚಿಗೊಳಿಸುವ ಅಗತ್ಯ ಯಂತ್ರವನ್ನು ಸದ್ಯದಲ್ಲಿಯೇ ಒದಗಿಸಲಾಗುತ್ತದೆ’ ಎಂದು ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.