ADVERTISEMENT

ಕಾರವಾರ: ‘ಟುಪಲೇವ್’ಗೆ ಮರು ಉದ್ಘಾಟನೆ ಭಾಗ್ಯ

10 ತಿಂಗಳು ಬಾಗಿಲು ಮುಚ್ಚಿ ಈಗ ವೀಕ್ಷಣೆಗೆ ಅನುವು ಮಾಡಿಕೊಡುತ್ತಿರುವ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 6:38 IST
Last Updated 15 ಆಗಸ್ಟ್ 2025, 6:38 IST
ಕಾರವಾರದಲ್ಲಿರುವ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ
ಕಾರವಾರದಲ್ಲಿರುವ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ   

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಒಂದೂವರೆ ವರ್ಷದ ಹಿಂದೆ ನೆಲೆನಿಂತ ‘ಟುಪಲೇವ್ (142 ಎಂ)’ ಯುದ್ಧವಿಮಾನ ವಸ್ತು ಸಂಗ್ರಹಾಲಯ ಶುಕ್ರವಾರ ಎರಡನೇ ಬಾರಿ ಉದ್ಘಾಟನೆಗೊಳ್ಳಲಿದೆ.

ರಾಜ್ಯದ ಏಕೈಕ ಯುದ್ಧ ವಿಮಾನ ವಸ್ತುಸಂಗ್ರಹಾಲಯವನ್ನು 2024ರ ಜೂನ್ 29 ರಂದು ಶಾಸಕ ಸತೀಶ ಸೈಲ್ ಉದ್ಘಾಟಿಸಿದ್ದರು. ನಾಲ್ಕು ತಿಂಗಳುಗಳ ಕಾಲ ವಸ್ತುಸಂಗ್ರಹಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಿಸಲಾಗಿತ್ತು. ಈ ಅವಧಿಯಲ್ಲಿ 28 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು.

ಆದರೆ, ಅ.24ರ ಬಳಿಕ ತಾಂತ್ರಿಕ ಕಾರಣ ನೀಡಿ ಯುದ್ಧವಿಮಾನ ವಸ್ತುಸಂಗ್ರಹಾಲಯದ ನಿರ್ವಹಣೆ ನೋಡಿಕೊಳ್ಳುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ವಿಧಿಸಿತ್ತು. 10 ತಿಂಗಳ ಬಳಿಕ ಪುನಃ ಅವಕಾಶ ಮಾಡಿಕೊಡಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ದಿನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎರಡನೇ ಬಾರಿಗೆ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ADVERTISEMENT

‘ಯುದ್ಧವಿಮಾನದಲ್ಲಿ ಹವಾನಿಯಂತ್ರಕದ ವ್ಯವಸ್ಥೆ ಇರಲಿಲ್ಲ. ಇದರಿಂದ ಬೇಸಿಗೆಯಲ್ಲಿ ಒಳಗಿರುವ ಯಂತ್ರೋಪಕರಣಗಳು ಹಾಳಾಗುವ ಸಾಧ್ಯತೆ ಇತ್ತು. ಜೊತೆಗೆ ಜನರು ವೀಕ್ಷಿಸಲು ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಹವಾನಿಯಂತ್ರಕ ಅಳವಡಿಸುವ ಕೆಲಸ ಪ್ರಗತಿಯಲ್ಲಿತ್ತು. ಅಳವಡಿಕೆಯಾದ ಬಳಿಕ ವಿದ್ಯುತ್ ಸಂಪರ್ಕದಲ್ಲಿ ತೊಂದರೆ ಉಂಟಾಗಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ವಸ್ತುಸಂಗ್ರಹಾಲಯ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಯುದ್ಧವಿಮಾನ ವಸ್ತು ಸಂಗ್ರಹಾಲಯವನ್ನು ಪ್ರವಾಸಿಗರು ಹೆಚ್ಚು ಬರುವ ಅವಧಿಯಲ್ಲಿ ಬಾಗಿಲು ಮುಚ್ಚಿ, ಈಗ ಮಳೆಗಾಲದಲ್ಲಿ ಪುನಃ ಬಾಗಿಲು ತೆರೆಯಲಾಗುತ್ತಿದೆ. ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ವಸ್ತುಸಂಗ್ರಹಾಲಯ ಸ್ಥಗಿತಗೊಂಡಿರುವ ಬಗ್ಗೆ ದೂರು ನೀಡಿದ್ದರೂ ಸ್ಪಂದಿಸಿಯೇ ಇರಲಿಲ್ಲ. ಹೊರರಾಜ್ಯದಿಂದ ಪ್ರವಾಸಿಗರು ಬಂದು ವಸ್ತುಸಂಗ್ರಹಾಲಯ ನೋಡಲಾಗದೆ ಬೇಸರಿಸಿಕೊಂಡು ಮರಳಿದ್ದನ್ನು ಕಣ್ಣಾರೆ ನೋಡಿದ್ದೇನೆ’ ಎಂದು ವ್ಯಾಪಾರಿ ದೀಪಕ ನಾಯ್ಕ ದೂರಿದರು.

ತಾಂತ್ರಿಕ ಕಾರಣಗಳಿಂದ ಯುದ್ಧವಿಮಾನ ವಸ್ತುಸಂಗ್ರಹಾಲಯ ಸ್ಥಗಿತಗೊಂಡಿತ್ತು. ಈಗ ಪುನರಾರಂಭಿಸಲಾಗುತ್ತಿದ್ದು ಅಧಿಕೃತವಾಗಿ ಉದ್ಘಾಟನೆ ನಡೆಯಲಿದೆ
ಕೆ. ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

ಬಳಕೆಯಾಗದ ₹2 ಕೋಟಿ

ಟುಪಲೇವ್ ಯುದ್ಧವಿಮಾನ ವಸ್ತುಸಂಗ್ರಹಾಲಯದ ಸುತ್ತ ಉದ್ಯಾನ ಉಪಹಾರಗೃಹ ನಿರ್ಮಾಣ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ₹2 ಕೋಟಿ ಮಂಜೂರಾಗಿ ಎರಡು ವರ್ಷ ಕಳೆದಿದೆ. ಉದ್ಯಾನ ನಿರ್ಮಾಣ ಸೇರಿದಂತೆ ಸೌಕರ್ಯಗಳ ಅಳವಡಿಕೆಗೆ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ನೀಡಲಾಗಿದೆ ಎಂದು ಜಿಲ್ಲಾಡಳಿತ ವರ್ಷದ ಹಿಂದೆಯೇ ತಿಳಿಸಿತ್ತು. ಈವರೆಗೆ ಉದ್ಯಾನದ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂಬುದು ಜನರ ದೂರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.