ADVERTISEMENT

ಜೀವ ಸಂಕುಲ ರಕ್ಷಣೆಯಿಂದ ಪರಿಸರ ಉಳಿವು

ಆಮೆ ಉತ್ಸವದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 16:31 IST
Last Updated 30 ಮಾರ್ಚ್ 2023, 16:31 IST
ಕಾರವಾರದಲ್ಲಿ ನಡೆದ ಆಮೆ ಉತ್ಸವಕ್ಕೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಕಾಂಡ್ಲಾ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು
ಕಾರವಾರದಲ್ಲಿ ನಡೆದ ಆಮೆ ಉತ್ಸವಕ್ಕೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಕಾಂಡ್ಲಾ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು   

ಕಾರವಾರ: ‘ಪರಿಸರ ಸಮತೋಲನವಾಗಿರಲು ಪ್ರತಿ ಜೀವಿ ಸಂಕುಲಗಳನ್ನೂ ಸಂರಕ್ಷಿಸುವುದು ಅಗತ್ಯವಾಗಿದೆ’ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಹೇಳಿದರು.

ಇಲ್ಲಿನ ವನಸಿರಿ ಸಭಾಂಗಣದಲ್ಲಿ ಗುರುವಾರ ಕಾರವಾರ ಅರಣ್ಯ ಉಪವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಆಮೆ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೊಡ್ಡ ಪ್ರಾಣಿಗಳು ಸೇರಿದಂತೆ ಹಲವು ಸಸ್ತನಿಗಳನ್ನು ಸಂರಕ್ಷಿಸಲು ಸಂರಕ್ಷಣೆ ಕಾಯ್ದೆ ಜಾರಿಯಲ್ಲಿದೆ. ಆದರೆ ಅಳಿವಿನಂಚಿನ ಅಪಾಯದಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆಗೆ ಪ್ರತ್ಯೇಕ ಕಾಯ್ದೆ ಇಲ್ಲ. ಸಂರಕ್ಷಣೆಗೆ ಕಾಯ್ದೆಯೇ ಬೇಕಂತಿಲ್ಲ. ಜನರಲ್ಲಿ ಜಾಗೃತಿ ಇದ್ದರೆ ಸಂರಕ್ಷಣೆ ಸಾಧ್ಯವಾಗಲಿದೆ’ ಎಂದರು.

ADVERTISEMENT

‘ಅಭಿವೃದ್ಧಿ ಹೆಸರಿನಲ್ಲಿ ಪರಿಸರ ವ್ಯವಸ್ಥೆ ನಾಶ ಮಾಡುವ ಕೆಲಸ ಆಗುತ್ತಿದೆ. ಪ್ರತಿ ಜೀವಿಗಳೊಂದಿಗೆ ಪರಿಸರ ವ್ಯವಸ್ಥೆಯ ಸಂಬಂಧವಿದೆ. ಯಾವುದೇ ಒಂದು ಜೀವಿ ಅಳಿದರೂ ಅದರ ದುಷ್ಪರಿಣಾಮವನ್ನು ಪರಿಸರ ವ್ಯವಸ್ಥೆ ಎದುರಿಸಬೇಕಾಗುತ್ತದೆ’ ಎಂದರು.

ಉಪನ್ಯಾಸ ನೀಡಿದ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೆಂದ್ರದ ಮುಖ್ಯಸ್ಥ ಜೆ.ಎಲ್.ರಾಠೋಡ್, ‘ಭೂಮಿ ತನಗೆ ಸಂಬಂಧಿಸಿದ್ದು ಎಂಬ ತಪ್ಪು ಕಲ್ಪನೆಯಿಂದ ಮನುಷ್ಯ ಹೊರಬರಬೇಕು. ಆತ ಭೂಮಿಯ ಒಂದು ಅಲ್ಪ ಭಾಗ, ಅವರಂತೆಯೆ ಕಡಲಾಮೆಯಂತಹ ಲಕ್ಷಾಂತರ ಜೀವಿಗಳಿವೆ. ಬೆಳಕು ಮೀನುಗಾರಿಕೆ, ಕಡಲು ಮಾಲಿನ್ಯಗಳಿಂದ ಕಡಲಾಮೆಗಳು ನಶಿಸುತ್ತಿವೆ ಎಂದರು.

ಕೆನರಾ ಅರಣ್ಯ ವೃತ್ತದ ಸಿ.ಎಫ್. ಕೆ.ವಿ.ವಸಂತ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಎಫ್ ಕೆ.ಸಿ.ಪ್ರಶಾಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ, ಸಿ.ಎಂ.ಎಫ್.ಆರ್.ಐ. ವಿಜ್ಞಾನಿ ಪ್ರತಿಭಾ ರೋಹಿತ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬೀನ್ ಬೋಪಣ್ಣ, ಡಿಸಿಎಫ್ ಗಳಾದ ಸಿ.ರವಿಶಂಕರ, ಮಂಜುನಾಥ ನಾವಿ ಇದ್ದರು. ವಿವಿಧ ಬಗೆಯ ಕಡಲಾಮೆಗಳ ಪ್ರತಿಕೃತಿಗಳ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.