ADVERTISEMENT

ದಾಂಡೇಲಿ: ನಕಲಿ ನೋಟು ಪ್ರಕರಣದಲ್ಲಿ ಮತ್ತಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 15:01 IST
Last Updated 10 ಜೂನ್ 2021, 15:01 IST
ದಾಂಡೇಲಿಯಲ್ಲಿ ಜೂನ್ 1ರಂದು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ನಕಲಿ ನೋಟುಗಳನ್ನು ಪೊಲೀಸರು ಪ್ರದರ್ಶಿಸಿದರು (ಸಂಗ್ರಹ ಚಿತ್ರ)
ದಾಂಡೇಲಿಯಲ್ಲಿ ಜೂನ್ 1ರಂದು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ನಕಲಿ ನೋಟುಗಳನ್ನು ಪೊಲೀಸರು ಪ್ರದರ್ಶಿಸಿದರು (ಸಂಗ್ರಹ ಚಿತ್ರ)   

ದಾಂಡೇಲಿ: ನಕಲಿ ಕರೆನ್ಸಿ ನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಎಂಟಕ್ಕೇರಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡದ ನಿವಾಸಿಗಳಾದ ಸರ್ಫರಾಜ್ ಅಬುತಲಿಬ್ ಹಿರೇಕರ್ ಮತ್ತು ಖುರ್ಷಿದ್ ಮಹಮ್ಮದ್ ರಫೀಕ್ ಸಕಲಿ ಬಂಧಿತರು.

ಆರೋಪಿಗಳಿಂದ, ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವಿಜಯ ಜೋಸೆಫ್ ಮನೆಯಲ್ಲಿ ಬಚ್ಚಿಡಲಾಗಿದ್ದ ಲ್ಯಾಪ್‌ಟಾಪ್ ಮತ್ತು ಪ್ರಿಂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ಬಂಧನದಲ್ಲಿರುವ ಶಿವಾಜಿ ಶ್ರವಣ ಕಾಂಬಳೆ ಹಾಗೂ ಶಬ್ಬೀರ್ ಅಂತೋನಿ ಇಸ್ಮಾಯಿಲ್ ಕುಟ್ಟಿ ಅವರ ವಿಚಾರಣೆಯ ವೇಳೆ ಸಿಕ್ಕಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿಜಯ ಜೋಸೆಫ್ ಬಂಧನ ಆಗಬೇಕಿದೆ ಎಂದು ಗ್ರಾಮೀಣ ಠಾಣೆಯ ಪಿ.ಎ.ಎಸ್.ಐ ಐ.ಆರ್.ಗಡ್ಡೇಕರ ತಿಳಿಸಿದ್ದಾರೆ.

ADVERTISEMENT

ಘಟನೆಯ ಹಿನ್ನೆಲೆ:

ಜೂನ್ 1ರಂದು ದಾಂಡೇಲಿ ಸಮೀಪದ ಬರ್ಚಿ ರಸ್ತೆಯ ಚೆಕ್‌ಪೋಸ್ಟ್ ಬಳಿ ನಕಲಿ ನೋಟುಗಳನ್ನು ಕಾರುಗಳಲ್ಲಿ ಸಾಗಿಸಲಾಗುತ್ತಿತ್ತು. ಇದರ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಅವರಿಂದ ₹ 72 ಲಕ್ಷ ಮೌಲ್ಯದ ನಕಲಿ ನೋಟುಗಳು ಮತ್ತು ₹ 4.50 ಲಕ್ಷ ಮೌಲ್ಯದ, ₹ 500 ಮುಖಬೆಲೆಯ ಅಸಲಿ ನೋಟುಗಳು, ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

ಸಾರ್ವಜನಿಕರು ಆರೋಪಿಗಳಿಂದ ಮೋಸ ಹೋಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅಥವಾ ದಾಂಡೇಲಿ ಗ್ರಾಮೀಣ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.