
ಹಳಿಯಾಳ: ಇಲ್ಲಿನ ಎಪಿಎಂಸಿ ಹತ್ತಿರ ಇರುವ ಅಂಗಡಿ ಗ್ಯಾಸ್ ಸರ್ವಿಸ್ ಹಾಗೂ ಭಕ್ತರಿಂದ ಗ್ಯಾಸ್ ಸರ್ವಿಸ್‌ನ ಜಮೀನಿನಲ್ಲಿ ಉಳವಿ ಜಾತ್ರೆಗೆ ಹೊರಡುವ ಪಾದಯಾತ್ರೆಗಳಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ನಡೆಸಲಾಗುತ್ತಿದೆ.
ಸುಮಂಗಲಾ ಚಂದ್ರಕಾಂತ ಅಂಗಡಿ, ಶಿರಾಜ್ ಮುಸ್ತಫಾ ಮುನವಳ್ಳಿ ಹಾಗೂ ಧಾರವಾಡದ ಉಳವಿ ಚನ್ನಬಸವೇಶ್ವರ ಅನ್ನದಾಸೋಹ ಸಮಿತಿ ವತಿಯಿಂದ ಈಗಾಗಲೇ ದಾಸೋಹ ಆರಂಭಿಸಲಾಗಿದ್ದು, ಫೆ.1ರವರಗೆ ಈ ಸೇವೆ ನಡೆಯಲಿದೆ.
ನಿತ್ಯ ಬೆಳಿಗ್ಗೆ ಉಪಾಹಾರ, ಚಹಾ, ಮಧ್ಯಾಹ್ನ ಊಟ, ಸಂಜೆ ಅಲ್ಪ ಉಪಾಹಾರ ಜೊತೆಗೆ ಚಹಾ, ಕಾಫಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಚಕ್ಕಡಿ ಹೇರಿಕೊಂಡು ಬಂದ ಎತ್ತುಗಳಿಗೆ ಮೇವು, ನುಚ್ಚು(ಹಿಂಡಿ) ಹಾಗೂ ಪಾದಯಾತ್ರೆಯಿಂದ ಬಂದವರಿಗೂ ಕಾಲಿಗೆ ಎಣ್ಣೆಯ ಲೇಪನಗೋಸ್ಕರ ಎಣ್ಣೆಯ ಪ್ಯಾಕೆಟ್‌ಗಳ ವ್ಯವಸ್ಥೆ ಸಹ ಮಾಡಲಾಗಿದೆ. ಅಗತ್ಯ ಇದ್ದಲ್ಲಿ ಜಾನುವಾರುಗಳಿಗೆ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗುತ್ತಿದೆ.
ಬೇರೆ ಬೇರೆ ಊರುಗಳಿಂದ ಉಳವಿಗೆ ತೆರಳುವ ಭಕ್ತರು ಮೊದಲೇ ಕರೆ ಮಾಡಿ ತಿಳಿಸುತ್ತಾರೆ. ಜೊತೆಗೆ ಯಾರೇ ಬಂದರೂ ಎಷ್ಟೇ ಹೊತ್ತಾದರೂ ದಾಸೋಹದ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ನಿತ್ಯ ಸಂಜೆ ವಿವಿಧ ಕ್ಷೇತ್ರ ಮಠಗಳ ಸ್ವಾಮೀಜಿಗಳು ಒಗ್ಗೂಡಿದಾಗ, ವಿಶ್ರಾಂತಿ ಪಡೆದುಕೊಂಡ ಯಾತ್ರಾರ್ಥಿಗಳಿಗೆ ಪ್ರವಚನ ನೀಡುತ್ತಾರೆ.
ಕಳೆದ 7 ವರ್ಷಗಳಿಂದ ಶಿವಾನಂದ ಚೆನ್ನಪ್ಪ ದೇವಗಿರಿ, ಸಂಜೀವ ಲಕಮನಹಳ್ಳಿ, ಶಿವಪುತ್ರಪ್ಪ ಬಾವಿಕಟ್ಟಿ, ವಿರೂಪಾಕ್ಷ ಹೊಟಗಿ, ಸರಸ್ವತಿ ಪೂಜಾರ ಕಿತ್ತೂರ ಜೊತೆಗೆ ಸ್ಥಳೀಯ ಸುಮಂಗಲಾ ಅಂಗಡಿ, ಶಿರಾಜ ಮುನವಳ್ಳಿ, ಸಿದ್ದಲಿಂಗ ನೇಗನಾಳ, ಮಹಾದೇವಿ ನೇಗನಾಳ, ಶಿವಾನಂದ ನೇಸರಗಿ, ಬಸವರಾಜ ಗಾಣಗೇರ ದಾಸೋಹದಲ್ಲಿಸಹಕಾರ ನೀಡುತ್ತಿದ್ದಾರೆ.
ಭಕ್ತರು ದಾಸೋಹಕ್ಕಾಗಿ ಮೊ.ಸಂ: 9449930493, 9916526870, 9480039319 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.