ADVERTISEMENT

ರಜೆ ಕಡಿತಗೊಳಿಸಿ ವೇತನ: ಕೆಎಸ್‌ಆರ್‌‌ಟಿಸಿ ನೌಕರರ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 13:52 IST
Last Updated 4 ಜುಲೈ 2020, 13:52 IST
   

ಶಿರಸಿ: ಲಾಕ್‌ಡೌನ್ 4.0ದಲ್ಲಿ ಕಾರ್ಮಿಕರಿಂದ ರಜೆ ಅರ್ಜಿ ಪಡೆಯದೇ, ಅವರ ಖಾತೆಯಲ್ಲಿನ ರಜೆಯನ್ನು ಕಡಿತಗೊಳಿಸಿ ವೇತನ ನೀಡಲಾಗಿದೆ. ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲ ಮತ್ತು ಕಾರ್ಮಿಕರ ಒಕ್ಕೂಟ ಹೋರಾಟ ನಡೆಸುತ್ತದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಮುಕುಂದನ್ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮೇ 4ರಿಂದ 18ರವರೆಗೆ ಉತ್ತರ ಕನ್ನಡ ಜಿಲ್ಲೆಯು ಆರೆಂಜ್ ವಲಯದಲ್ಲಿತ್ತು. ಶಿರಸಿ ವಿಭಾಗದ ಯಾವುದೇ ಘಟಕದಲ್ಲಿಯೂ ವಲಸೆ ಕಾರ್ಮಿಕರ ಕಾರ್ಯಾಚರಣೆ ಹೊರತುಪಡಿಸಿ ಇತರ ಮಾರ್ಗಗಳ ಕಾರ್ಯಾಚರಣೆ ಆಗಿಲ್ಲ. ಸಾರಿಗೆ ಸಚಿವರು ಈ ಅವಧಿಯನ್ನು ವಿಶೇಷ ರಜೆಯೆಂದು ಪರಿಗಣಿಸಬೇಕೆಂದು ಆದೇಶ ನೀಡಿದ್ದರು. ಮೇ 19ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲಾ ಸಿಬ್ಬಂದಿಗೆ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ಆದೇಶದಂತೆ, ಕೆಲವರನ್ನು ಹೊರತುಪಡಿಸಿ ಬಹಳಷ್ಟು ಕಾರ್ಮಿಕರು ಘಟಕಕ್ಕೆ ಹಾಜರಾಗಿದ್ದರು. ಘಟಕದಲ್ಲಿ ಕಾರ್ಯಾಚರಣೆಯಾದ ಕೆಲವೇ ಕೆಲವು ಅನುಸೂಚಿಗಳಿಗೆ ನಿಯೋಜಿಸಿದ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು. ಇನ್ನುಳಿದ ಸಿಬ್ಬಂದಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶದಂತೆ, ಕಚೇರಿಗೆ ಬಂದು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದರು. ಮೇ 19ರಿಂದ 31ರವರೆಗೆ ಘಟಕದಲ್ಲಿ ಹಾಜರಾತಿ ಇದ್ದರೂ ಸಹ ಕಾರ್ಮಿಕರ ಖಾತೆಯಲ್ಲಿರುವ ಸ್ವಂತ ರಜೆಯನ್ನು ಬರೆದು ಕೊಡುವಂತೆ ಮೌಖಿಕ ಆದೇಶ ನೀಡಿ ರಜೆ ಅರ್ಜಿ ಪಡೆದು, ವೇತನ ಮಂಜೂರು ಮಾಡಿದ್ದಾರೆ. ರಜೆ ಅರ್ಜಿ ನೀಡದವರಿಗೆ ವೇತನ ಮಂಜೂರು ಆಗಿಲ್ಲ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT