ಶಿರಸಿ: ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದು ಸರಿಯಾಗಿದ್ದರೆ ನಾನು ಮಾತನಾಡಿದ್ದು ಕೂಡ ಸರಿಯಿದೆ. ಕಾಂಗ್ರೆಸ್‌ನವರಿಗೆ, ಸಿದ್ದರಾಮಯ್ಯಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೇಕೆ? ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಶ್ನಿಸಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಇದೆಲ್ಲದರ ಬಗ್ಗೆ ಜನರ ಮುಂದೆ ಚರ್ಚೆ ಮಾಡೋಣ. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪೂಜನೀಯ ದೇವಸ್ಥಾನಗಳ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದು ಸಿದ್ದರಾಮಯ್ಯ. ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು? ರಾಮ ಮಂದಿರದ ವಿಷಯದಲ್ಲಿ ಸಿಎಂ ಹೇಗೆ ವರ್ತಿಸಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದರು.
ಕಾಂಗ್ರೆಸ್ಸಿಗರಾದ ಸಲ್ಮಾನ್ ಖುರ್ಷದ್ ಮೋದಿಯವರನ್ನು ಕಪ್ಪೆ, ಮಂಗ, ನಪಸುಂಕ ಎಂದು ಕರೆದರು. ಶರದ್ ಪವಾರ್ ಹಿಟ್ಲರ್ ಎಂದರು. ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾಸ್ ಮರ್ಡರರ್ ಎಂದು ಕರೆದರು. ದಿಗ್ವಿಜಯ ಸಿಂಗ್ ರಾವಣ ಎಂದು ಕರೆದರು, ಜಯರಾಂ ರಮೇಶ್ ಭಸ್ಮಾಸುರ ಎಂದರು. ಇನ್ನೂ ಏನೇನು ಹೇಳಿಸಿಕೊಳ್ಳಬೇಕು ನಾವು? ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಯಾರಿಗೆ ಯಾವ ಭಾಷೆಯಲ್ಲಿ, ಹೇಗೆ ಮಾತಾಡಬೇಕು ಹಾಗೆ ಮಾತನಾಡಿದ್ದೇನೆ. ಯಾರು ನನ್ನ ಒಪ್ಪಿಕೊಳ್ಳುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಹಿಂದೂ ಸಮಾಜ ನನ್ನನ್ನು ಒಪ್ಪಿದೆ ಎಂದರು. ಸಂಸ್ಕೃತಿ, ಸಭ್ಯತೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಹಾಗೂ ಸಿದ್ದರಾಮಯ್ಯ ನನ್ನ ಮುಂದೆ ಬಹಿರಂಗ ಚರ್ಚೆ ಮಾಡಲಿ. ಅವುಗಳ ಬಗ್ಗೆ ನಾನು ಅವರಿಗೆ ಪಾಠ ಮಾಡುತ್ತೇನೆ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಏಕವಚನದ ಹೇಳಿಕೆ ಬಳಸಿರುವುದು ನನ್ನ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆ ಅಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.