ADVERTISEMENT

ಉತ್ತರ ಕನ್ನಡ: ಮೂರು ವರ್ಷದ ಬಳಿಕ ಚಿಗಿತುಕೊಂಡ ಪ್ರವಾಸೋದ್ಯಮ ಚಟುವಟಿಕೆ

ಗಣಪತಿ ಹೆಗಡೆ
Published 11 ಜನವರಿ 2023, 0:15 IST
Last Updated 11 ಜನವರಿ 2023, 0:15 IST
ಮುರ್ಡೇಶ್ವರ ಕಡಲತೀರದಲ್ಲಿ ಜಲಸಾಹಸ ಚಟುವಟಿಕೆಯಲ್ಲಿ ನಿರತರಾಗಿರುವ ಪ್ರವಾಸಿಗರು
ಮುರ್ಡೇಶ್ವರ ಕಡಲತೀರದಲ್ಲಿ ಜಲಸಾಹಸ ಚಟುವಟಿಕೆಯಲ್ಲಿ ನಿರತರಾಗಿರುವ ಪ್ರವಾಸಿಗರು   

ಕಾರವಾರ: ಜಿಲ್ಲೆಯ ಜೀವಾಳ ಎನಿಸಿರುವ ಪ್ರವಾಸೋದ್ಯಮ ಕ್ಷೇತ್ರ ಮೂರು ವರ್ಷದ ಬಳಿಕ ಚಿಗಿತುಕೊಂಡಿದೆ. ಕಳೆದ ವರ್ಷ ಜಿಲ್ಲೆಗೆ ಬರೋಬ್ಬರಿ 1.03 ಕೋಟಿ ಪ್ರವಾಸಿಗರು ಭೇಟಿ ನೀಡುವ ಮೂಲಕ ಇದು ಸಾಬೀತಾಗಿದೆ.

2020ಕ್ಕೂ ಮೊದಲು ಜಿಲ್ಲೆಗೆ ಪ್ರತಿ ವರ್ಷ ಸರಾಸರಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸರಾಸರಿ 50 ರಿಂದ 55 ಲಕ್ಷದಷ್ಟಿತ್ತು. ಕಳೆದ ಎರಡು ವರ್ಷ ಈ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆಯಾಗಿತ್ತು.

160 ಮೀ. ಉದ್ದದ ಕಡಲತೀರ, ಜಲಪಾತ, ಪ್ರಾಕೃತಿಕ ಸೊಬಗಿನ ತಾಣಗಳು, ಐತಿಹಾಸಿಕ ದೇಗುಲಗಳು, ಕೋಟೆ ಹೀಗೆ ಪ್ರವಾಸಿಗರ ಕಣ್ಮನ ಸೆಳೆಯುವ ಜಿಲ್ಲೆಯ ತಾಣಗಳು ಭರಪೂರ ಪ್ರವಾಸಿಗರನ್ನು ಕಳೆದ ವರ್ಷ ಸೆಳೆದಿದ್ದವು. ಮಳೆಗಾಲದ ಮೂರು ತಿಂಗಳು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಜಿಲ್ಲೆಯ ಬಹುಪಾಲು ತಾಣಗಳಲ್ಲಿ ಪ್ರವಾಸಿಗರ ಜಂಗುಳಿ ಕಂಡುಬಂದಿತ್ತು.

ADVERTISEMENT

ಪ್ರವಾಸೋದ್ಯಮ ಇಲಾಖೆ ಕಲೆಹಾಕಿರುವ ಮಾಹಿತಿ ಅನ್ವಯ ಇದೇ ಮೊದಲ ಬಾರಿಗೆ ಜಿಲ್ಲೆಗೆ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಯ್ದ 40 ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಒಟ್ಟು ಸಂಖ್ಯೆ 1,03,02,382 ಎನ್ನುತ್ತಿದೆ ಇಲಾಖೆಯ ಅಂಕಿ–ಅಂಶ.

ಗೋಕರ್ಣ, ಮುರ್ಡೇಶ್ವರ ಹೆಚ್ಚು ಪ್ರವಾಸಿಗರನ್ನು ಸೆಳೆದಿವೆ. ದಾಂಡೇಲಿಗೂ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ತಾಣಗಳಿಗೆ ಹೊರರಾಜ್ಯ, ವಿದೇಶದಿಂದಲೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು. ವರ್ಷಾಂತ್ಯದ ವೇಳೆಯಲ್ಲಿ ಪ್ರವಾಸಿಗರ ಆಗಮನ ಪ್ರಮಾಣ ನಿರೀಕ್ಷೆಗೂ ಮೀರಿತ್ತು ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

‘ಶಿರಸಿಯ ಮಾರಿಕಾಂಬಾ ದೇವಾಲಯ, ಯಾಣ, ಸಾತೊಡ್ಡಿ, ಮಾಗೋಡ, ವಿಭೂತಿ ಜಲಪಾತಗಳು, ಕುಮಟಾ ತಾಲ್ಲೂಕಿನ ಮಿರ್ಜಾನ್ ಕೋಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚು ದಾಟಿವೆ. ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಒಟ್ಟೂ ಸಂಖ್ಯೆಯಲ್ಲಿ ಶೇ.80ರಷ್ಟು ಮಂದಿ ಕರಾವಳಿ ಭಾಗಕ್ಕೆ ಭೇಟಿ ಕೊಟ್ಟಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

‘ಕೋವಿಡ್, ನೆರೆ ಹಾವಳಿ ಭೀತಿಯಿಂದ ಮೂರು ವರ್ಷದ ಕಾಲ ಪ್ರವಾಸೋದ್ಯಮ ಚಟುವಟಿಕೆ ಹೊಳಪು ಕಳೆದುಕೊಂಡಿತ್ತು. ಸೀಮಿತ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುತ್ತಿದ್ದರು. ಈ ಬಾರಿ ಅತಿ ಹೆಚ್ಚು ಜನ ಮುರ್ಡೇಶ್ವರಕ್ಕೆ ಭೇಟಿ ನೀಡಿದ್ದಾರೆ. ಜಲಸಾಹಸ ಚಟುವಟಿಕೆಗಳಿಗೆ ನಿರಂತರ ಬೇಡಿಕೆ ಕಂಡುಕೊಳ್ಳಲಾಗಿದೆ’ ಎಂದು ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಮಾಲಕ ಗಣೇಶ್ ಹರಿಕಂತ್ರ ಹೇಳುತ್ತಾರೆ.

ಪಟ್ಟಿಯಲ್ಲಿದೆ ಅಂಜದೀವ್ ದ್ವೀಪ:

ಪ್ರವಾಸೋದ್ಯಮ ಇಲಾಖೆ ಪ್ರತಿ ವರ್ಷ ಆಯಾ ಜಿಲ್ಲೆಗಳ ಆಯ್ದ ಪ್ರವಾಸಿ ತಾಣಗಳ ಪಟ್ಟಿ ಸಿದ್ಧಪಡಿಸುತ್ತದೆ. ಅಂತಹ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಮಾಹಿತಿ ಕಲೆ ಹಾಕುತ್ತದೆ. ಕಾರವಾರದ ಸಮೀಪದ ಅಂಜದೀವ್ ನಡುಗಡ್ಡೆ ನೌಕಾನೆಲೆ ವ್ಯಾಪ್ತಿಗೆ ಸೇರಿ ಸುಮಾರು ಎರಡು ದಶಕ ಕಳೆದಿದೆ. ಆದರೆ ಈ ನಡುಗಡ್ಡೆ ಈಗಲೂ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿಯೇ ಉಳಿದುಕೊಂಡಿದೆ!

‘ಅಂಜದೀವ್ ನಡುಗಡ್ಡೆ ಪಟ್ಟಿಯಿಂದ ಕೈಬಿಡಲು ಹಲವು ವರ್ಷದ ಹಿಂದೆಯೇ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ತಾಂತ್ರಿಕ ಅಡಚಣೆಯಿಂದ ಪಟ್ಟಿಯಿಂದ ಕೈಬಿಡಲು ಸಾಧ್ಯವಾಗಿಲ್ಲ. ಆದರೆ ನಡುಗಡ್ಡೆಗೆ ಭೇಟಿ ನೀಡಲು ಅವಕಾಶ ಇಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳಿದರು.

----------------

ಪ್ರವಾಸೋದ್ಯಮ ಚಟುವಟಿಕೆಗೆ ಪೂರಕ ವಾತಾವರಣ ಇದ್ದ ಕಾರಣ ಕಳೆದ ಸಾಲಿನಲ್ಲಿ ಹೆಚ್ಚು ಜನ ಭೇಟಿ ನೀಡಿದ್ದಾರೆ.

ಜಯಂತ್

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.