
ಕಾರವಾರ: ಆರೋಗ್ಯ ಸೌಕರ್ಯದಲ್ಲಿ ತೀರಾ ಹಿಂದುಳಿದಿರುವ ಜಿಲ್ಲೆಯಲ್ಲಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಿಸಬೇಕು ಎಂಬ ಕೂಗು ಬಲವಾಗಿದ್ದರೂ, ಸರ್ಕಾರ ಮನ್ನಣೆ ನೀಡಿಲ್ಲ. ಈ ಬಾರಿಯಾದರೂ ರಾಜ್ಯ ಸರ್ಕಾರ ಅನುದಾನ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.
ಐದು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಪಘಾತದ ವೇಳೆ ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟವರ ಸಂಖ್ಯೆ ಅಧಿಕವಾಗಿದೆ. ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಲು ಒತ್ತಾಯಿಸಿ ಲೆಕ್ಕವಿಲ್ಲದಷ್ಟು ಪ್ರತಿಭಟನೆ ನಡೆದಿದೆ. 2023ರಲ್ಲಿ ಹಿಂದಿನ ಸರ್ಕಾರದ ಅವಧಿ ಕೊನೆಗೊಳ್ಳುವ ಹೊತ್ತಲ್ಲಿ ಕುಮಟಾದಲ್ಲಿ ಆಸ್ಪತ್ರೆ ಸ್ಥಾಪಿಸಲು ಜಾಗ ಗುರುತಿಸಿ ಜನರನ್ನು ಸಂತೈಸುವ ಪ್ರಯತ್ನ ನಡೆದಿತ್ತು. ಆದರೆ, ಜಾಗ ಬಳಕೆಯೂ ಆಗಿಲ್ಲ. ಆಸ್ಪತ್ರೆ ಸ್ಥಾಪನೆ ಪ್ರಯತ್ನ ಮುಂದೆ ಸಾಗಿಲ್ಲ ಎಂಬ ದೂರು ಜನರದ್ದು.
‘ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲೇ (ಕ್ರಿಮ್ಸ್) ಹೆಚ್ಚುವರಿ ಸೌಲಭ್ಯ ಒದಗಿಸಿ, ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡ ತೆರವುಗೊಳಿಸಿ, ಅಲ್ಲಿ 450 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಿಸುವುದು. ಆ ಕಟ್ಟಡದಲ್ಲಿ ಹೃದ್ರೋಗ ವಿಭಾಗ (ಕ್ಯಾಥ್‍ಲ್ಯಾಬ್), ನರರೋಗ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಟ್ರಾಮಾ ಸೆಂಟರ್ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಸೌಕರ್ಯ ಕಲ್ಪಿಸಿ, ತಜ್ಞ ವೈದ್ಯರನ್ನು ನೇಮಕ ಮಾಡಬೇಕು. ಇದಕ್ಕಾಗಿ ತಗಲುವ ₹250 ಕೋಟಿ ವೆಚ್ಚ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ’ ಎನ್ನುತ್ತಾರೆ ಶಾಸಕ ಸತೀಶ ಸೈಲ್.
‘ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿದ್ದರೂ ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಅನುದಾನ ನೀಡಿಲ್ಲ. ಇದಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ.
ಜಿಲ್ಲೆಯ 83 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 20ಕ್ಕೂ ಹೆಚ್ಚು ಕಡೆಗಳಲ್ಲಿ ವೈದ್ಯರ ಹುದ್ದೆ ಖಾಲಿ ಇದೆ. ತಾಲ್ಲೂಕು ಆಸ್ಪತ್ರೆಗಳಲ್ಲಿಯೂ 34 ತಜ್ಞ ಹುದ್ದೆಗಳ ಭರ್ತಿಗೆ ಆರೋಗ್ಯ ಇಲಾಖೆ ಹರಸಾಹಸಪಡುತ್ತಿದೆ.
‘ಆಸ್ಪತ್ರೆಗಳಲ್ಲಿ ಕಟ್ಟಡ, ಯಂತ್ರೋಪಕರಣಗಳ ಲಭ್ಯತೆ ಇವೆ. ಆದರೆ, ಚಿಕಿತ್ಸೆ ನೀಡಲು ತಜ್ಞ ವೈದ್ಯರು ಜಿಲ್ಲೆಗೆ ಬರುತ್ತಿಲ್ಲ. ಗಡಿಭಾಗದ ಪ್ರದೇಶ ಎಂಬುದು ಒಂದೆಡೆಯಾದರೆ, ಗುಡ್ಡಗಾಡುಗಳ ನಡುವೆ ಹಳ್ಳಿಗಳಿರುವುದು ಹೆಚ್ಚಿದೆ. ಇಂತಹ ಪ್ರದೇಶಕ್ಕೆ ವೈದ್ಯರ ನೇಮಕಕ್ಕೆ ಸರ್ಕಾರ ವಿಶೇಷ ನಿಯಮ ರೂಪಿಸಬೇಕು’ ಎಂಬುದು ಹಿರಿಯ ವೈದ್ಯಾಧಿಕಾರಿಯೊಬ್ಬರ ಅಭಿಪ್ರಾಯ.
ಕ್ರಿಮ್ಸ್‌ನಲ್ಲಿಯೇ ಹೆಚ್ಚುವರಿ ಸೌಕರ್ಯ ಒದಗಿಸಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಬಜೆಟ್‌ನಲ್ಲಿ ಅನುದಾನ ಸಿಗದಿದ್ದರೆ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಎಚ್ಚರಿಸಿದ್ದೇನೆಸತೀಶ ಸೈಲ್ ಶಾಸಕ
ಬೃಹತ್ ಯೋಜನೆಗಳನ್ನು ಉತ್ತರ ಕನ್ನಡ ಮೇಲೆ ಹೇರುವ ಸರ್ಕಾರ ಜಿಲ್ಲೆಯ ಜನರು ಕೇಳುತ್ತಿರುವ ಆರೋಗ್ಯ ಸೌಕರ್ಯ ಒದಗಿಸಲು ಬಜೆಟ್‌ನಲ್ಲಿ ಅನುದಾನ ಘೋಷಿಸಲಿಮಾಸ್ತಪ್ಪ ನಾಯ್ಕ ಹೊನ್ನಾವರ ಸಾಮಾಜಿಕ ಕಾರ್ಯಕರ್ತ
‘ಏಮ್ಸ್’ ಸ್ಥಾಪನೆಗೆ ಆಗ್ರಹ ಹೆಚ್ಚಲಿ
‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಜಿಲ್ಲೆಯಲ್ಲಿ ಒತ್ತಡ ಹೆಚ್ಚುತ್ತಿದೆ. ಆದರೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಒತ್ತಡ ಹೇರುವ ಕೆಲಸ ನಡೆದಿಲ್ಲ. ಈ ದಿಶೆಯಲ್ಲಿ ಪ್ರಯತ್ನ ಸಾಗಿದರೆ ಫಲ ಸಿಗಬಹುದು ಎಂಬ ಆಶಾವಾದ ಇದೆ’ ಎನ್ನುತ್ತಾರೆ ಹಿರಿಯ ವೈದ್ಯ ಶಿರಸಿಯ ಡಾ.ರವಿಕಿರಣ ಪಟವರ್ಧನ. ‘ಏಮ್ಸ್ ಸ್ಥಾಪನೆ ಕೇಂದ್ರ ಸರ್ಕಾರದ ಜವಾಬ್ದಾರಿ. ಅದಕ್ಕೆ ಜಾಗ ಒದಗಿಸುವುದು ರಾಜ್ಯ ಸರ್ಕಾರದ ಕೆಲಸ. ಏಮ್ಸ್ ಸ್ಥಾಪನೆಯಾದರೆ ದೇಶದಲ್ಲಿ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯ ತಜ್ಞ ವೈದ್ಯರ ನೇಮಕ ಆಗಲಿದೆ. ನೌಕಾನೆಲೆ ಅಣು ವಿದ್ಯುತ್ ಸ್ಥಾವರದಂತಹ ಬೃಹತ್ ರಾಷ್ಟ್ರೀಯ ಯೋಜನೆಗಳಿರುವ ಜಿಲ್ಲೆಯಲ್ಲಿ ಒತ್ತಾಯ ಹೆಚ್ಚಿದರೆ ಕೇಂದ್ರ ಸರ್ಕಾರ ಏಮ್ಸ್ ಸ್ಥಾಪನೆಗೆ ಮನಸ್ಸು ಮಾಡಬಹುದು. ಏಮ್ಸ್‌ನಿಂದ ಜಿಲ್ಲೆಯ ಜನರಿಗೆ ಆರೋಗ್ಯ ಸೌಕರ್ಯ ಸಿಗುವ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಲಿದೆ’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.