ADVERTISEMENT

ಕಾರವಾರ | ಜಿಲ್ಲೆಯ ಸಮಗ್ರ ಅಭಿವೃದ್ಧಿ ಗಮನದಲ್ಲಿರಲಿ: ಜಿ.ಪಂ ಸಿಇಒ ಸಲಹೆ

ಮಾನವ ಅಭಿವೃದ್ಧಿ ಯೋಜನೆ ವರದಿ ತಯಾರಿಕೆ ಕಾರ್ಯಾಗಾರ: ಜಿ.ಪಂ ಸಿಇಒ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:30 IST
Last Updated 3 ಫೆಬ್ರುವರಿ 2026, 6:30 IST
ಕಾರವಾರದಲ್ಲಿ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ಯೋಜನೆ ವರದಿ ತಯಾರಿಕೆಗೆ ಸಂಬಂಧಿಸಿದ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿದರು
ಕಾರವಾರದಲ್ಲಿ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ಯೋಜನೆ ವರದಿ ತಯಾರಿಕೆಗೆ ಸಂಬಂಧಿಸಿದ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿದರು   

ಕಾರವಾರ: ‘ಜಿಲ್ಲೆಯ ಆರ್ಥಿಕತೆಗೆ ಜೀವಾಳವಾಗಿರುವ ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಗಳ ಜೊತೆಗೆ ಕಿರು ಉದ್ಯಮಗಳ ಕ್ಷೇತ್ರಗಳ ಬಗ್ಗೆ ಕೂಲಂಕಷ ಅಧ್ಯಯನ ನಡೆಸುವ ಮೂಲಕ ಮಾನವ ಅಭಿವೃದ್ಧಿ ವರದಿ ತಯಾರಿಕೆಗೆ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಸಲಹೆ ನೀಡಿದರು.

ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಾನವ ಅಭಿವೃದ್ಧಿ ಯೋಜನೆ ವರದಿ ತಯಾರಿಕೆಗೆ ಸಂಬಂಧಿಸಿದ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಟಾಚಾರಕ್ಕೆ ಅಂಕಿ–ಅಂಶಗಳನ್ನು ದಾಖಲಿಸುವ ಕೆಲಸ ಆಗಬಾರದು. ಪ್ರತಿ ಕ್ಷೇತ್ರವಾರು ನಿಖರ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರಿಂದ ಪೂರಕ ಅಂಶಗಳ ಮಾಹಿತಿ ದಾಖಲಿಸಬೇಕು. ಜಿಲ್ಲೆಯ ಜನರ ಈಗಿನ ಜೀವನ ಸ್ಥಿತಿ ಮತ್ತು ಅದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಉದ್ದೇಶಕ್ಕೆ ವರದಿ ಪೂರಕವಾಗಿರಬೇಕು’ ಎಂದರು.

ADVERTISEMENT

‘2031ರಲ್ಲಿ ಸುಸ್ಥಿರ ಅಭಿವೃದ್ಧಿ ಹೊಂದುವ ಕುರಿತಂತೆ ಪ್ರತಿ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತ ಮಾಹಿತಿಯನ್ನು ಸ್ಪಷ್ಟವಾಗಿ ವಿವರಿಸಬೇಕು. ಅಧಿಕಾರಿಗಳು ಒಟ್ಟಾಗಿ ತಂಡದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

ಸಾಂಖ್ಯಿಕ ಇಲಾಖೆಯ ಹಿರಿಯ ನಿರ್ದೇಶಕ ಎಸ್.ಬಸವರಾಜ್ ಮಾತನಾಡಿ, ‘ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟವನ್ನು ಆಧರಿಸಿ ಅಭಿವೃದ್ಧಿ ಸೂಚ್ಯಂಕ ಪರಿಗಣಿಸಲಾಗುತ್ತಿದೆ. 10 ವರ್ಷಗಳ ಬಳಿಕ ಮಾನವ ಅಭಿವೃದ್ಧಿ ವರದಿಯನ್ನು ತಯಾರಿಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಸರ್ಕಾರಗಳು ಜಾರಿಗೆ ತಂದ ಹಲವು ಯೋಜನಗಳು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಜೀವನಮಟ್ಟದಲ್ಲಿ ಆಗಿರುವ ಬದಲಾವಣೆ ಮತ್ತು ಸುಧಾರಣೆಗಳ ಬಗ್ಗೆ ಪರಿಶೀಲಿಸಿ ಇದನ್ನು ಮತ್ತಷ್ಟು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ವಿವರ ಮಾಹಿತಿಗಳಿರಬೇಕು’ ಎಂದರು.

ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಎಸ್.ಅಲ್ಲಾಭಕ್ಷ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಂ.ಡಿ.ಆರ್ ಧಾರವಾಡದ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ವಿ.ಹನಗೋಡಿ ಮಠ, ನಾರಾಯಣ ಬಿಲ್ಲವ ಪಾಲ್ಗೊಂಡಿದ್ದರು.

ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾವುದೇ ಅಸಮಾನತೆ ಉಂಟಾಗದಂತೆ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳನ್ನು ವರದಿ ಒಳಗೊಂಡಿರಬೇಕು
ಡಾ.ದಿಲೀಷ್ ಶಶಿ ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.