
ಕಾರವಾರ: ಅರಬ್ಬಿ ಸಮುದ್ರದಲ್ಲಿರುವ, ಜಿಲ್ಲೆಯ ವ್ಯಾಪ್ತಿಯ 7 ದ್ವೀಪಗಳಲ್ಲಿ ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಸಂಬಂಧ ತಾಂತ್ರಿಕ ವಹಿವಾಟು ಸಲಹೆ (ಟ್ರ್ಯಾನ್ಸಾಕ್ಷನ್ ಅಡ್ವೈಸ್) ಪಡೆಯಲು ಖಾಸಗಿ ಕಂಪನಿಯೊಂದನ್ನು ಕರ್ನಾಟಕ ಜಲಸಾರಿಗೆ ಮಂಡಳಿ ನಿಯೋಜನೆ ಮಾಡಿದೆ.
ಸಲಹೆ ಪಡೆಯುವ ಸಲುವಾಗಿ ಮಂಡಳಿ ಮೊದಲ ಬಾರಿಗೆ ಕರೆದಿದ್ದ ಟೆಂಡರ್‌ನಲ್ಲಿ ಯಾರೊಬ್ಬರೂ ಪಾಲ್ಗೊಂಡಿರಲಿಲ್ಲ. ಹೀಗಾಗಿ, ಅಕ್ಟೋಬರ್‌ನಲ್ಲಿ ಎರಡನೇ ಬಾರಿ ಮರು ಟೆಂಡರ್ ಕರೆದ ವೇಳೆ ಕಾಲಾಂತ ಅಡ್ವೈಸರಿ ಎಂಬ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ. ಇದೇ ಸಂಸ್ಥೆಗೆ ಕಾರ್ಯಾದೇಶ ನೀಡುವುದು ಬಾಕಿ ಇದೆ ಎಂದು ಜಲಸಾರಿಗೆ ಮಂಡಳಿ ಮೂಲಗಳು ತಿಳಿಸಿವೆ.
‘ಅರಬ್ಬಿ ಸಮುದ್ರದಲ್ಲಿರುವ 7 ದ್ವೀಪಗಳಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ತರಲು ಯೋಚಿಸಲಾಗಿದೆ. ಕಾರವಾರ ಸಮೀಪದ ಕೂರ್ಮಗಡ, ಮದ್ಯಲಿಂಗಗಡ, ದೇವಗಡ, ಮೊಂಗ್ರೆಗುಡ್ಡ, ಭಟ್ಕಳ ಸಮೀಪದ ಹೊಗ್ (ಜಾಲಿಕುಂಡ) ಮತ್ತು ಕಿರಿಕುಂಡ. ಅಂಕೋಲಾ ತಾಲ್ಲೂಕಿನ ಅಂಕನಿ ಚೆಗ್ಗುಡ್ಡ ದ್ವೀಪಗಳನ್ನು ಮೊದಲ ಹಂತದ ಯೋಜನೆಗೆ ಗುರುತಿಸಲಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಜನವಸತಿ ರಹಿತವಾಗಿರುವ ನಡುಗಡ್ಡೆಗಳಲ್ಲಿ ನೇಚರ್ ಕ್ಯಾಂಪ್, ವೆಲ್‌ನೆಸ್ ಸೆಂಟರ್ ಸೇರಿದಂತೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಇದಕ್ಕಾಗಿ ಅಂದಾಜು ₹131.51 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ. ಆದರೆ, ಈಗ ತಾಂತ್ರಿಕ ವಹಿವಾಟು ಸಲಹೆ ನೀಡಲು ನಿಯೋಜನೆಗೊಂಡ ಸಂಸ್ಥೆಯ ವರದಿ ಆಧರಿಸಿ ಯೋಜನೆಗಳಲ್ಲಿ ಬದಲಾವಣೆಗಳಾಗಬಹುದು’ ಎಂದರು.
ದ್ವೀಪಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಚಟುವಟಿಕೆ ಬೆಳೆಯಲು ಅನುಕೂಲವಾಗಲಿದೆಮಂಕಾಳ ವೈದ್ಯ ಬಂದರು ಇಲಾಖೆ ಸಚಿವ
ಕಾರವಾರ ವ್ಯಾಪ್ತಿಯ ಕೂರ್ಮಗಡ, ಮಧ್ಯಲಿಂಗಗಡ, ದೇವಗಡ (ಓಯ್‌ಸ್ಟರ್ ರಾಕ್) ಮತ್ತು ಮೊಂಗ್ರೆಗುಡ್ಡ ದ್ವೀಪಗಳಿಗೆ ಸಂಬಂಧಿಸಿದ ಪಹಣಿಯ 9 ಮತ್ತು 11ನೇ ಕಾಲಂಗಳಲ್ಲಿ ಜಲಸಾರಿಗೆ ಮಂಡಳಿಯ ಮಾಲೀಕತ್ವ ನಮೂದಿಸಲು ಕಂದಾಯ ಇಲಾಖೆಗೆ ಮಂಡಳಿಯು ಪತ್ರ ಬರೆದಿತ್ತು. ಕೂರ್ಮಗಡ ದ್ವೀಪದ 33.18 ಎಕರೆ ಜಾಗದ ಪೈಕಿ 1 ಎಕರೆ ಮಾತ್ರ ಬಂದರು ಇಲಾಖೆ ಹೆಸರಿನಲ್ಲಿದ್ದು, ಉಳಿದ 32.18 ಎಕರೆ ಜಾಗ ಖಾಸಗಿ ವ್ಯಕ್ತಿಯೊಬ್ಬರ ಸ್ವತ್ತಾಗಿದೆ. ಅವುಗಳ ಹೊರತಾಗಿ ಉಳಿದ ಮೂರು ದ್ವೀಪಗಳಿಗೆ ಯಾವುದೇ ಸರ್ವೆ ಸಂಖ್ಯೆ ಇಲ್ಲ. ಪಹಣಿಯೂ ಇಲ್ಲ. ಅವುಗಳ ಸರ್ವೆ ನಡೆಸಿ, ಹೊಸದಾಗಿ ಪಹಣಿ ಸಿದ್ಧಪಡಿಸುವ ಅಗತ್ಯವಿದೆ ಎಂದು ತಹಶೀಲ್ದಾರ್ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
‘ದ್ವೀಪಗಳ ಜಾಗಕ್ಕೆ ಸರ್ವೆ ಸಂಖ್ಯೆ ಇಲ್ಲ. ಇದರಿಂದ ಈಗಿರುವ ಪದ್ಧತಿಯಲ್ಲಿ ಸರ್ವೆ ನಡೆಸುವುದು ಕಷ್ಟ. ಡ್ರೋನ್ ಅಥವಾ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಣಿತ ಸರ್ವೇಯರ್‌ಗಳ ಮೂಲಕ ಸರ್ವೆ ನಡೆಸಿ, ದಾಖಲೆಗಳನ್ನು ಸಿದ್ಧಪಡಿಸಬೇಕಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.