ADVERTISEMENT

ಉತ್ತರ ಕನ್ನಡ | ಸ್ವಚ್ಛತೆಗಾಗಿ ಕಾರವಾರದಿಂದ ಗೋವಾವರೆಗೆ ಪಾದಯಾತ್ರೆ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 4:27 IST
Last Updated 23 ಜನವರಿ 2023, 4:27 IST
   

ಕಾರವಾರ: ಇಲ್ಲಿನ ಪಹರೆ ವೇದಿಕೆ ತನ್ನ 8ನೇ ವರ್ಷದ ಸ್ವಚ್ಛತಾ ಶ್ರಮದಾನದ ಅಂಗವಾಗಿ ಭಾನುವಾರ ನಗರದಿಂದ 18 ಕಿ.ಮೀ. ದೂರದ ಗೋವಾ ರಾಜ್ಯದ ಗಡಿಭಾಗ ಪೊಳೆಮ್‍ವರೆಗೆ ಪಾದಯಾತ್ರೆ ನಡೆಸಿದ್ದು ಗಮನಸೆಳೆಯಿತು.

ವಾರಕ್ಕೊಮ್ಮೆ ಸ್ವಚ್ಛತಾ ಶ್ರಮದಾನ ನಡೆಸಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ವೇದಿಕೆ ಈ ಬಾರಿ ಗಡಿಯ ಆಚೆಗೂ ತನ್ನತನ ಪಸರಿಸುವ ಕೆಲಸ ಮಾಡಿತು. ಇಲ್ಲಿನ ಸುಭಾಷ ವೃತ್ತದ ಬಳಿ ಸುಭಾಷಚಂದ್ರ ಬೋಸ್ ಪ್ರತಿಮೆಗೆ ಗೌರವ ಅರ್ಪಿಸಿದ ಬಳಿಕ ಪಾದಯಾತ್ರೆ ಆರಂಭಗೊಂಡಿತು.

ಸದಾಶಿವಗಡ, ಆರವ, ಮಾಜಾಳಿ ಗ್ರಾಮಗಳಲ್ಲಿ ಸಾಗಿದ ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಸ್ವಚ್ಛತೆಯ ಮೂಲಕ ಪರಿಸರದ ಉಳಿವು ಸಂದೇಶ ಸಾರುವ ಪ್ರಯತ್ನ ನಡೆಸಲಾಯಿತು. ಕಸಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಜನರಿಗೆ ತಿಳಿಹೇಳಲಾಯಿತು.

ADVERTISEMENT

‘ಅಕ್ಷರ ಸಂತ’ ಹರಕಳ ಹಾಜಬ್ಬ ಪಾಲ್ಗೊಂಡಿದ್ದು ಗಮನಸೆಳೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಸ್ವಚ್ಛತೆ ಕೆಲಸವನ್ನು ಅಭಿಯಾನದ ಮಾದರಿಯಲ್ಲಿ ನಿರಂತರ ನಡೆಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ. ಪಹರೆ ವೇದಿಕೆಯ ಕಾರ್ಯ ದೇಶಕ್ಕೆ ಮಾದರಿ ಆಗುವಂತಿದೆ’ ಎಂದು ಬಣ್ಣಿಸಿದರು.

‘ಕನ್ನಡ ಮಣ್ಣಿನ ಸಂಘಟನೆ ನೆರೆಯ ಗೋವಾದಲ್ಲೂ ಸ್ವಚ್ಛತೆಯ ಅರಿವು ಮೂಡಿಸುವ ಮಹತ್ತರ ನಿರ್ಣಯ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ. ಪಹರೆ ವೇದಿಕೆ ಸಮಾಜದ ಅಮೂಲ್ಯ ಆಸ್ತಿಯಾಗಿದೆ’ ಎಂದರು.

ಗೋವಾ ಕೊಂಕಣಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗೌರೀಶ ವೆರ್ಣೇಕರ, ‘ಆಧುನಿಕತೆಯ ಹೆಸರಿನಲ್ಲಿ ಪರಿಸರದ ನಾಶ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳು ಭೂಮಿಯನ್ನು ನಾಶ ಮಾಡುತ್ತಿದ್ದು, ನಿಸರ್ಗ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಪ್ರಮುಖರಾದ ಸತೀಶ್ ಸೈಲ್, ಶುಭಲತಾ ಅಸ್ನೋಟಿಕರ್, ಕಾರವಾರ ಡಿಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಗೋವಾದ ಲೊಲೆಮ್ ಗ್ರಾಮ ಪಂಚಾಯ್ತಿ ಸದಸ್ಯ ಚೇತನ್ ನಾಯ್ಕ, ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಪರಿಸರ ಬರಹಗಾರ ಶಿವಾನಂದ ಕಳವೆ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.