ADVERTISEMENT

ಅಂಕೋಲಾ ತಾಲ್ಲೂಕಿನ ಕುಗ್ರಾಮ ವರೀಲಬೇಣ: ರೋಗಿಗೆ ಕುರ್ಚಿಯೇ ಆಂಬುಲೆನ್ಸ್!

ಈ ಊರಿಗಿಲ್ಲ ರಸ್ತೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 5:37 IST
Last Updated 5 ಮಾರ್ಚ್ 2021, 5:37 IST
ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದ ವರೀಲಬೇಣದಿಂದ ರೋಗಿಯೊಬ್ಬರನ್ನು ಕುರ್ಚಿಯಲ್ಲಿ ಕೂರಿಸಿ ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವುದು
ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದ ವರೀಲಬೇಣದಿಂದ ರೋಗಿಯೊಬ್ಬರನ್ನು ಕುರ್ಚಿಯಲ್ಲಿ ಕೂರಿಸಿ ಗ್ರಾಮಸ್ಥರು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವುದು   

ಕಾರವಾರ: ಇಲ್ಲಿ ರೋಗಿಗೆ ಕುರ್ಚಿಯೇ ಆಂಬುಲೆನ್ಸ್, ಊರಿನಲ್ಲಿರುವ ಹಿರಿಯರೇ ತಕ್ಷಣದ ವೈದ್ಯರು, ಈ ಊರಿಗೆ ಸರಿಯಾದ ಸಂಪರ್ಕ ರಸ್ತೆಯಿಲ್ಲ, ಕಾಡುಮೇಡಿನ ಕೊರಕಲು ದಾರಿ...ರೋಗಿಯನ್ನು ಕರೆದುಕೊಂಡು ಹೋಗುವವರ ಕಾಲು ಸ್ವಲ್ಪ ಜಾರಿದರೂ... ಅಪಾಯ!

ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರೀಲಬೇಣ ಎಂಬ ಕುಗ್ರಾಮದ ಜನರ ಜೀವನದ ಚಿತ್ರಣವಿದು.

ಗ್ರಾಮದ ನೂರಾ ಪೊಕ್ಕ ಗೌಡ (70) ಎಂಬುವವರು ಬುಧವಾರ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಸಮೀಪದಲ್ಲಿ ಎಲ್ಲೂ ಚಿಕಿತ್ಸೆಯ ವ್ಯವಸ್ಥೆಯಿಲ್ಲ. ಹಾಗಾಗಿ ಅವರ ಸಂಬಂಧಿಕರು ಗುರುವಾರ, ಗಟ್ಟಿಯಾದ ಕೋಲಿಗೆ ಬೆತ್ತದ ಕುರ್ಚಿಯನ್ನು ಕಟ್ಟಿ ಅದರಲ್ಲಿ ಅವರನ್ನು ಕೂರಿಸಿದರು. ಬಳಿಕ ನಾಲ್ಕಾರು ಮಂದಿ ಸೇರಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಕಾಡುಮೇಡಿನ ದಾರಿಯಲ್ಲಿ ಸಾಗಿದರು. ಅತ್ಯಂತ ಜಾಗರೂಕತೆಯಿಂದ ಐದು ಕಿಲೋಮೀಟರ್ ಹೆಜ್ಜೆ ಹಾಕಿ ರಸ್ತೆಗೆ ತಲುಪಿದರು.

ADVERTISEMENT

ತಾಲ್ಲೂಕು ಕೇಂದ್ರ ಅಂಕೋಲಾದಲ್ಲಿ ಆಂಬುಲೆನ್ಸ್ ಕೂಡ ಲಭ್ಯವಿರಲಿಲ್ಲ. ಖಾಸಗಿ ವಾಹನವನ್ನು ಬಾಡಿಗೆಗೆ ನಿಗದಿ ಮಾಡಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆಯನ್ನು ಎದುರಿಸಿದರು.

ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರ

ಈ ಹಳ್ಳಿಯು ದಟ್ಟಾರಣ್ಯದಿಂದ ಸುತ್ತುವರಿದಿದ್ದು, ಬೆಟ್ಟದ ಮೇಲೆ ಸ್ವಂತ ಜಮೀನಿನಲ್ಲಿ 11 ಕುಟುಂಬಗಳು ವಾಸಿಸುತ್ತಿವೆ.ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿಲೋಮೀಟರ್‌ ಹಾಗೂ ಗ್ರಾಮ ಕೇಂದ್ರವಾದ ಹಟ್ಟಿಕೇರಿಯಿಂದ 11 ಕಿ.ಮೀ ದೂರದಲ್ಲಿದೆ. ಆರು ಕಿಲೋಮೀಟರ್ ದೂರದವರೆಗೆ ಕೇವಲ ದ್ವಿಚಕ್ರ ವಾಹನಗಳು ಸಂಚರಿಸಲು ಸಾಧ್ಯ. ಅಲ್ಲಿಂದ ನಂತರ ಕಾಡಿನ ನಡುವೆ ನಡೆದುಕೊಂಡೇ ಸಾಗಬೇಕು.

ಗ್ರಾಮದಲ್ಲಿ ನಾಲ್ಕೈದು ಮಕ್ಕಳಿದ್ದು, ಅವರೆಲ್ಲ ಸಕಲಬೇಣ ಎಂಬಲ್ಲಿ ಸಂಬಂಧಿಕರ ಮನೆಗಳಲ್ಲಿ ಇದ್ದುಕೊಂಡು ಶಾಲೆಗಳಿಗೆ ಹೋಗುತ್ತಿದ್ದಾರೆ. ತಮ್ಮ ಗ್ರಾಮಕ್ಕೆ ಕನಿಷ್ಠ ದ್ವಿಚಕ್ರ ವಾಹನಗಳಾದರೂ ಬರುವ ವ್ಯವಸ್ಥೆಯಾದರೆ ಬಹಳ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಸಂಪರ್ಕದಲ್ಲಿದ್ದೇವೆ’

‘ವರೀಲಬೇಣ ಪ್ರದೇಶವು ಮೀಸಲು ಅರಣ್ಯ ಪ್ರದೇಶ ನಡುವೆಯಿದೆ. ಅಲ್ಲಿನ ಗ್ರಾಮಸ್ಥರೊಂದಿಗೆ ಸಂಪರ್ಕದಲ್ಲಿದ್ದೇವೆ. ಗ್ರಾಮಕ್ಕೆ ಬಿ.ಎಸ್.ಎನ್.ಎಲ್ ಮೊಬೈಲ್ ನೆಟ್‌ವರ್ಕ್ ಸಿಗುತ್ತದೆ. ಮನೆಗಳಿಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ’ ಎಂದು ಹಟ್ಟಿಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೀಲಾ ಆಗೇರ ಪ್ರಜಾವಾಣಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.