ADVERTISEMENT

ಧರ್ಮದ ಮೆರವಣಿಗೆಯಿಲ್ಲದ ದೇಶ: ತಜಿಕಿಸ್ತಾನದ ಅನುಭವ ಹಂಚಿಕೊಂಡ ನಿರಂಜನ ವಾನಳ್ಳಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 12:56 IST
Last Updated 2 ಜನವರಿ 2020, 12:56 IST
ಶಿರಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ನಿರಂಜನ ವಾನಳ್ಳಿ ಮಾತನಾಡಿದರು
ಶಿರಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ನಿರಂಜನ ವಾನಳ್ಳಿ ಮಾತನಾಡಿದರು   

ಶಿರಸಿ: ಸಾರ್ವಜನಿಕವಾಗಿ ಧರ್ಮದ ಮೆರವಣಿಗೆಯಿಲ್ಲದ ದೇಶ ತಜಿಕಿಸ್ತಾನ. ಸರ್ಕಾರದ ನಿಯಮ ಕೂಡ ಇದನ್ನೇ ಹೇಳುತ್ತದೆ. ಹೀಗಾಗಿ ಜನರು ಸಹ ಸಾರ್ವಜನಿಕ ಪ್ರದರ್ಶನವಿಲ್ಲದೇ, ವೈಯಕ್ತಿಕ ನೆಲೆಯಲ್ಲಿ ಧರ್ಮಾಚರಣೆ ಮಾಡುತ್ತಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನಿರಂಜನ ವಾನಳ್ಳಿ ಹೇಳಿದರು.

ಗುರುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ಕೇಂದ್ರ ಸರ್ಕಾರದ ಐಸಿಸಿಆರ್ (Indian council for cultural relations) ಮೂಲಕ ಸಾಂಸ್ಕೃತಿಕ ರಾಯಭಾರಿಯಾಗಿ ಒಂದೂವರೆ ವರ್ಷ ಅವಧಿಗೆ ತಜಿಕಿಸ್ತಾನಕ್ಕೆ ಹೋಗಿ ಬಂದ ಅನುಭವ ಹಂಚಿಕೊಂಡರು. ತಜಿಕಿಸ್ತಾನದ ನಿವಾಸಿಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಕ್ರೈಸ್ತರು, ಬೌದ್ಧರು ಸಹ ಇಲ್ಲಿ ಇದ್ದಾರೆ. ಬುದ್ಧನ ಕಾಲದಲ್ಲಿ ಬೌದ್ಧ ಕೇಂದ್ರವಾಗಿದ್ದ ಇಲ್ಲಿ, 87 ಅಡಿ ಉದ್ದದ ಮಲಗಿರುವ ಬುದ್ಧನ ಮೂರ್ತಿಯಿದೆ ಎಂದರು.

‘ಭಿನ್ನವಾದ ಭೌಗೋಳಿಕ ಪ್ರದೇಶ ಹೊಂದಿರುವ ಈ ದೇಶದಲ್ಲಿ ಅರ್ಧ ವರ್ಷ ಮರಗೆಡುವ ಚಳಿ, ಇನ್ನರ್ಧ ವರ್ಷ ಸುಡು ಬಿಸಿಲು. ಇಲ್ಲಿನ ಪ್ರಮುಖ ಆದಾಯ ಜಲವಿದ್ಯುತ್ ಉತ್ಪಾದನೆ. ಶುದ್ಧ ನೀರು ಹಾಗೂ ಗಾಳಿ ಹೊಂದಿರುವ ಇಲ್ಲಿನ ಜನರು ದೀರ್ಘಾಯುಷಿಗಳು. ಹಿಂದಿ ಚಲನಚಿತ್ರ ನಟರ ಹೆಸರು ಹೇಳುವ ಮೂಲಕ ಭಾರತೀಯರನ್ನು ಗುರುತಿಸುವ ತಜಿಕಿಗಳು, ಭಾರತವನ್ನು ಹಿಂದೂಸ್ತಾನ ಎಂತಲೇ ಕರೆಯುತ್ತಾರೆ. ನಮ್ಮ ದೇಶ ಇಂಡಿಯಾ ಅಲ್ಲ, ಇದಕ್ಕೆ ಭಾರತವೆಂದು ಕರೆಯಲು ಇದು ಸಕಾಲ ಎಂದು ನನಗನ್ನಿಸಿತು’ ಎಂದು ಹೇಳಿದರು.

ADVERTISEMENT

‘ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮಾತ್ರ ಇಲ್ಲವೆಂದೇ ಹೇಳಬಹುದು. ಸರ್ಕಾರ ಪ್ರಾಯೋಜಿತ ವಾರಪತ್ರಿಕೆಗಳು, ಸರ್ಕಾರದ ಪರವಾದ ವರದಿಗಳನ್ನು ಮಾತ್ರ ಪ್ರಕಟಿಸುತ್ತವೆ. ಶೈಕ್ಷಣಿಕವಾಗಿ ಸಹ ಈ ದೇಶ ಅಷ್ಟಾಗಿ ಮುಂದುವರಿದಿಲ್ಲ. ಉತ್ತಮ ಶಿಕ್ಷಣಕ್ಕಾಗಿ ಪಾಲಕರು ಮಕ್ಕಳನ್ನು ಹೊರ ದೇಶಕ್ಕೆ ಕಳುಹಿಸುತ್ತಾರೆ. ಅನೇಕ ದೇಶಗಳು ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತವೆ. ಈ ದೇಶದಲ್ಲಿ ಕಾರ್ಯ ಗೌರವ (dignity of labour)ಕ್ಕೆ ಹೆಚ್ಚು ಮಹತ್ವವಿದೆ. ಎಲ್ಲ ವೃತ್ತಿಯಲ್ಲಿರುವವರನ್ನು ಸಮಾನವಾಗಿ ಕಾಣುತ್ತಾರೆ’ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸುಬ್ರಾಯ ಭಟ್ಟ ಬಕ್ಕಳ, ಎಂ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ಇದ್ದರು. ನರಸಿಂಹ ಅಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.