ADVERTISEMENT

ಬಿಳಿ ಹಾಳೆಯಲ್ಲಿ ಮುದ್ರಿತ ಆರ್.ಸಿ: ಆಕ್ಷೇಪ

ಬದಲಾದ ವ್ಯವಸ್ಥೆಯ ಮಾಹಿತಿಯಿಲ್ಲದೆ ಜನ, ಪೊಲೀಸರಿಗೆ ಗೊಂದಲದ ಆರೋಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 14:22 IST
Last Updated 19 ನವೆಂಬರ್ 2021, 14:22 IST
ಬಿಳಿ ಹಾಳೆಯಲ್ಲಿ ಮುದ್ರಿಸಿ ನೀಡಲಾಗುವ ಆರ್.ಸಿ ದಾಖಲೆಯ ಮಾದರಿ
ಬಿಳಿ ಹಾಳೆಯಲ್ಲಿ ಮುದ್ರಿಸಿ ನೀಡಲಾಗುವ ಆರ್.ಸಿ ದಾಖಲೆಯ ಮಾದರಿ   

ಕಾರವಾರ: ಸಾರಿಗೆ ಇಲಾಖೆಯು ವಾಹನಗಳ ನೋಂದಣಿ ದಾಖಲೆಯನ್ನು (ಆರ್.ಸಿ) ‘ಸ್ಮಾರ್ಟ್ ಕಾರ್ಡ್’ ಬದಲು ಕಾಗದದಲ್ಲಿ ಮುದ್ರಿಸಿ ನೀಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಈ ಮೊದಲು ಆರ್.ಸಿ.ಯನ್ನು ‘ಸ್ಮಾರ್ಟ್ ಕಾರ್ಡ್’ನಲ್ಲಿರುವ ಚಿಪ್‌ನಲ್ಲಿ ದಾಖಲಿಸಿ ಕೊಡಲಾಗುತ್ತಿತ್ತು. ಆದರೆ, ಚಿಪ್ ರೀಡರ್ ಸಲಕರಣೆಗಳು ಹಲವು ಕಡೆ ಸಾರಿಗೆ ಇಲಾಖೆಯ ಅಧಿಕಾರಿಗಳ ಬಳಿ ಇರಲಿಲ್ಲ. ಹಾಗಾಗಿ, ಇಲಾಖೆಯು ಹೊಸ ತಂತ್ರಾಂಶವನ್ನು ನ.10ರಂದು ಅಳವಡಿಸಿಕೊಂಡಿದೆ. ಅಂದಿನಿಂದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ‘ಎ5’ ಅಳತೆಯ ಕಾಗದದಲ್ಲಿ ಆರ್.ಸಿ ದಾಖಲೆಗಳನ್ನು ನೀಡಲಾಗುತ್ತಿದೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನಗರದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ‘ಹೊಸ ತಂತ್ರಾಂಶದ ಬಗ್ಗೆ ಸಾರಿಗೆ ಇಲಾಖೆಯಿಂದ ಯಾವುದೇ ಮಾಹಿತಿ ಸಾರ್ವಜನಿಕರಿಗೆ ನೀಡಿಲ್ಲ. ಈ ರೀತಿ ಹೊಸದಾಗಿ ಆರ್.ಸಿ. ಪಡೆದುಕೊಂಡವರನ್ನು ಪೊಲೀಸರು ತಪಾಸಣೆ ಮಾಡುವಾಗ ಗೊಂದಲ ಏರ್ಪಡುತ್ತಿದೆ. ಅವರಿಗೂ ಹೊಸ ಮಾದರಿಯ ಆರ್.ಸಿ ಬಗ್ಗೆ ಮಾಹಿತಿಯಿಲ್ಲದ ಕಾರಣ ವಾಗ್ವಾದವೂ ನಡೆಯುತ್ತಿದೆ’ ಎಂದು ದೂರಿದರು.

ADVERTISEMENT

‘ಈಗಲೂ ವಾಹನ ಮಾಲೀಕರು ಆರ್.ಸಿ. ಮಾಡಿಸಿಕೊಳ್ಳಲು ₹ 250 ಪಾವತಿಸಬೇಕು. ಹಾಗಿರುವಾಗ ಮೊದಲಿನಂತೆ ಸ್ಮಾರ್ಟ್ ಕಾರ್ಡ್ ಅಥವಾ ಕಾಗದಕ್ಕೆ ಲ್ಯಾಮಿನೇಷನ್ ಮಾಡಿಸುವಷ್ಟು ಸಾಮರ್ಥ್ಯ ಇಲಾಖೆಗೆ ಇಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸಾದಾ ಕಾಗದದಲ್ಲಿ ಮುದ್ರಿಸಿ ಕೊಡುವ ಆರ್.ಸಿ ಒಂದುವೇಳೆ ಹರಿದುಹೋದರೆ, ಮಳೆಯಲ್ಲಿ ನೆನೆದು ಹೋದರೆ ವಾಹನ ಮಾಲೀಕರು ಮತ್ತೆ ಹಣ ಪಾವತಿಸಿ ಹೊಸದನ್ನು ಪಡೆಯಬೇಕು. ಅದರಲ್ಲಿದ್ದ ವಾಹನದ ನೋಂದಣಿ ಸಂಖ್ಯೆ ಅಳಿಸಿ ಹೋದರೆ ಪುನಃ ಅಫಿಡವಿಟ್ ಮಾಡಿಸಿಕೊಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ನಂತರ ಆರ್.ಟಿ.ಒ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಇಷ್ಟೊಂದು ಜಟಿಲವಾಗಿರುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕ್ಯು.ಆರ್ ಕೋಡ್‌ನಲ್ಲಿ ಮಾಹಿತಿ:

‘ಆರ್.ಸಿ ಸ್ಮಾರ್ಟ್ ಕಾರ್ಡ್ ಮಾಡಿಕೊಡಲು ಖಾಸಗಿ ಏಜೆನ್ಸಿಯೊಂದಿಗೆ ಇದ್ದ ಒಪ್ಪಂದವು ಮುಕ್ತಾಯವಾಗಿದೆ. ಹಾಗಾಗಿ ರಾಜ್ಯ ಮಟ್ಟದಲ್ಲಿ ತಿಳಿಸಿದಂತೆ ಎ5 ಅಳತೆ ಕಾಗದದಲ್ಲಿ ಬಣ್ಣದ ಮುದ್ರಣ ಮಾಡಿ ಆರ್.ಸಿ ನೀಡಲಾಗುತ್ತಿದೆ. ಅದರಲ್ಲಿರುವ ಕ್ಯು.ಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಹನದ ಸಂಪೂರ್ಣ ಮಾಹಿತಿ ಸಿಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಚಾಲನಾ ಪರವಾನಗಿಗೆ ಸ್ಮಾರ್ಟ್ ಕಾರ್ಡ್ ನೀಡುವುದನ್ನು ಮುಂದುವರಿಸಲಾಗಿದೆ. ಆರ್.ಸಿ.ಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿ ಲ್ಯಾಮಿನೇಷನ್ ಮಾಡಬಹುದು. ಕೇಂದ್ರ ಕಚೇರಿಯ ಸೂಚನೆಯಂತೆ ಅದು ರಾಜ್ಯದಾದ್ಯಂತ ಜಾರಿಯಾಗಲಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.