ADVERTISEMENT

ಕಾರವಾರ | ದೇಶಕ್ಕಾಗಿ ತ್ಯಾಗ ಮಾಡಿದವರ ಕೊಡುಗೆ ಅವಿಸ್ಮರಣೀಯ: ಜಿಲ್ಲಾಧಿಕಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 8:36 IST
Last Updated 16 ಡಿಸೆಂಬರ್ 2021, 8:36 IST
   

ಕಾರವಾರ: 'ದೇಶಕ್ಕಾಗಿ ತಮ್ಮ ಮಗ, ಗಂಡನನ್ನು ತ್ಯಾಗ ಮಾಡಿದ ಕುಟುಂಬದವರ ಕೊಡುಗೆ ಬಹಳ ದೊಡ್ಡದು. ದೇಶ ಸೇವೆಗಾಗಿ ಕುಟುಂಬದ ಸದಸ್ಯರನ್ನು ಕಳಿಸುವುದಕ್ಕೂ ವಿಶೇಷ ಧೈರ್ಯ, ಕಾಳಜಿ ಬೇಕು' ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

'ವಿಜಯ ದಿವಸ'ದ ಸುವರ್ಣ ಮಹೋತ್ಸವದ ಅಂಗವಾಗಿ, ನಗರದ ಟ್ಯಾಗೋರ್ ಕಡಲ ತೀರದಲ್ಲಿರುವ ಯುದ್ಧ ಸ್ಮಾರಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'1971ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ದೇಶಕ್ಕೆ ಸಿಕ್ಕಿದ ಜಯ ಸಾಧಾರಣವಾದುದಲ್ಲ. ಹೊಸ ದೇಶವೊಂದನ್ನು ಸೃಷ್ಟಿಸುವ ಮೂಲಕ ಭಾರತ ಸೂಪರ್ ಪವರ್ ಆದ ಸಂದರ್ಭವದು' ಎಂದು ಹೇಳಿದರು.

ADVERTISEMENT

'ಎರಡನೇ ವಿಶ್ವಯುದ್ಧದ ಬಳಿಕ ಆಗಿನ ಸೂಪರ್ ಪವರ್ ದೇಶಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಆಗ ನಮ್ಮ ದೇಶ ಆರ್ಥಿಕವಾಗಿಯೂ ಬಲಾಢ್ಯವಾಗಿರಲಿಲ್ಲ. ಆಗಷ್ಟೇ ಗಣರಾಜ್ಯವಾಗಿ ಸ್ಥಿರತೆ ಪಡೆಯುತ್ತಿದ್ದೆವು. ಅಂಥ ಸಂದರ್ಭದಲ್ಲೂ ಹೊಸ ದೇಶವೊಂದನ್ನೇ ಸೃಷ್ಟಿ ಮಾಡುವುದು ಸಣ್ಣ ವಿಚಾರವಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ಯುದ್ಧ ಉದಾಹರಣೆಯಾಗಿದೆ' ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕದಂಬ ನೌಕಾನೆಲೆಯ ಸೀಬರ್ಡ್ ಯೋಜನೆಯ ಉಪ ಮಹಾನಿರ್ದೇಶಕ ಕಮಾಂಡರ್ ಸ್ವಾಮಿನಾಥನ್ ಬಾಲಕೃಷ್ಣನ್, 'ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧವು 13 ದಿನಗಳಲ್ಲೇ ಮುಕ್ತಾಯವಾಯಿತು. ಜನರಲ್ ನಿಯಾಜಿ ನೇತೃತ್ವದ ಪಾಕಿಸ್ತಾನಿ ಪಡೆಯು ನಮ್ಮ ಸೈನಿಕರ ಮುಂದೆ ಮಂಡಿಯೂರಿ ಶರಣಾಯ್ತು. ಆಪರೇಷನ್ ಟ್ರೈಡೆಂಟ್ ಮತ್ತು ಆಪರೇಷನ್ ಪೈಥಾನ್ ಬಹಳ ಅದ್ಭುತವಾದ ಕಾರ್ಯಾಚರಣೆಗಳು' ಎಂದು ಸ್ಮರಿಸಿದರು.

'ದೇಶದ ಭದ್ರತೆಯಲ್ಲಿ ಕಾರವಾರದ ನೌಕಾನೆಲೆಯ ಸೀಬರ್ಡ್‌‌ ಯೋಜನೆ ಬಹಳ ಮುಖ್ಯವಾಗಿದೆ. ಅದು ಪೂರ್ಣಗೊಂಡ ಬಳಿಕ ಜಾಗತಿಕ ನಕಾಶೆಯಲ್ಲಿ ಕಾರವಾರ ಕಾಣಿಸಿಕೊಳ್ಳಲಿದೆ' ಎಂದರು.

ಇದಕ್ಕೂ ಮೊದಲು ಗಣ್ಯರು ಮೇಜರ್ ರಾಮ ರಾಘೋಬ ರಾಣೆ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಇದ್ದರು.

ನೌಕಾಪಡೆಯ ಬ್ಯಾಂಡ್‌ ಸದಸ್ಯರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಸೇಂಟ್ ಮೈಕಲ್ಸ್ ಪ್ರೌಢಶಾಲೆಯ ಮಕ್ಕಳು ಪ್ರಾರ್ಥಿಸಿದರು. ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹುತಾತ್ಮರ ಕುಟುಂಬಕ್ಕೆ ಗೌರವ:

ಯುದ್ಧವೂ ಸೇರಿದಂತೆ ವಿವಿಧ ಕಾರ್ಯಾಚರಣೆಗಳ ಸಂದರ್ಭದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ವಿಶ್ವನಾಥ ಗಂಗೆಪುತ್ರ ಅವರ ಪತ್ನಿ ಮನೋರಥಿ ಬಾಯಿ, ಮನೋಹರ ಕಲ್ಗುಟ್ಕರ್ ಅವರ ಪತ್ನಿ ಗಂಗಾಬಾಯಿ, ಸಂದೀಪ ನಾಯಕ ಅವರ ತಾಯಿ, ರಮೇಶ ಕೊಳಂಬಕರ್ ಅವರ ಪತ್ನಿ ಗೀತಾ, ರಾಜನ್ ಕೊಠಾರಕರ್ ಅವರ ತಾಯಿ ಕಮಲಾಬಾಯಿ ಹಾಗೂ ವಿಜಯಾನಂದ ನಾಯಕ ತಾಯಿ ವಿದ್ಯಾ ನಾಯಕ ಗೌರವ ಸ್ವೀಕರಿಸಿದರು.

ಸೈನಿಕ ಕಲ್ಯಾಣ ನಿಧಿಗೆ ಈ ಬಾರಿ ರಾಜ್ಯದಲ್ಲೇ ಅತಿ ಹೆಚ್ಚು ದೇಣಿಗೆಯು ಉತ್ತರ ಕನ್ನಡದಲ್ಲಿ ಸಂಗ್ರಹವಾಗಿದೆ. ಜಿಲ್ಲೆಗೆ ನೀಡಲಾಗಿದ್ದ ರೂ 7 ಲಕ್ಷದ ಗುರಿಯನ್ನು ಮೀರಿ ರೂ 7.40 ಲಕ್ಷ ಸಂಗ್ರಹವಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ನೀಡಿದ ಸ್ಮರಣಿಕೆಯನ್ನು ಸೈನಿಕ ಕಲ್ಯಾಣ ಮಂಡಳಿಯ ಉಪ ನಿರ್ದೇಶಕಿ ಕಮಾಂಡರ್ ಇಂದುಪ್ರಭಾ.ವಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.