ADVERTISEMENT

ಕಾರವಾರ: 'ವಿಜಯ ದಿವಸ್' ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 7:16 IST
Last Updated 16 ಡಿಸೆಂಬರ್ 2020, 7:16 IST
   

ಕಾರವಾರ: 1971ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಗೆಲುವು ಸಾಧಿಸಿದ ನೆನಪಿಗೆ ನಗರದಲ್ಲಿ ಬುಧವಾರ 'ವಿಜಯ ದಿವಸ್' ಆಚರಿಸಲಾಯಿತು. ಐ.ಎನ್.ಎಸ್ ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಭಾರತೀಯ ಸೈನ್ಯದ ಮಾಜಿ ಮೇಜರ್ ರಾಮ ರಾಗೋಬ ರಾಣೆ ಅವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, 'ದೇಶ ರಕ್ಷಣೆಯ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲೆಯು ಸದಾ ಮುಂದಿರುತ್ತದೆ. ಇದು ಈ ನಮಗೂ ಹೆಮ್ಮೆಯ ಸಂಗತಿ' ಎಂದು ಹೇಳಿದರು.

'ಐಎನ್ಎಸ್ ವಜ್ರಕೋಶ'ದ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಸಜು ಜಾಯ್ ಮಾತನಾಡಿ, 'ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ವಿಮುಕ್ತಿ ಸಿಕ್ಕಿ 50 ವರ್ಷಗಳಾದವು. ಹಾಗಾಗಿ ಈ ಕಾರ್ಯಕ್ರಮವು ವಿಶೇಷವಾಗಿದೆ. ಭಾರತೀಯ ನೌಕಾದಳವು ದೇಶದ ಹಿತಾಸಕ್ತಿ, ಭದ್ರತೆ ಕಾಪಾಡಲು ಸದಾ ಬದ್ಧವಾಗಿರುತ್ತದೆ' ಎಂದರು.

ADVERTISEMENT

ಇದೇವೇಳೆ, ವಿವಿಧ ಯುದ್ಧಗಳು ಹಾಗೂ ಕಾರ್ಯಾಚರಣೆಗಳ ಸಂದರ್ಭದಲ್ಲಿ ಹುತಾತ್ಮರಾದ ಉತ್ತರ ಕನ್ನಡ ಜಿಲ್ಲೆಯ ಯೋಧರ ಕುಟುಂಬಗಳ ಸದಸ್ಯರನ್ನು ಸನ್ಮಾನಿಸಲಾಯಿತು. ಸೀಬರ್ಡ್ ನೌಕಾನೆಲೆಯ ಸಿಬ್ಬಂದಿ ದೇಶಭಕ್ತಿ ಗೀತೆಗಳ ಬ್ಯಾಂಡ್ ನಡೆಸಿಕೊಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಎನ್. ಸಿ.ಸಿ ಕಮಾಂಡೆಂಟ್ (ನೇವಲ್) ಸತ್ಯನಾಥ್ ಭೋಸ್ಲೆ ಹಾಗೂ ಸಮೀರ್ ಪವಾರ್ (ಆರ್ಮಿ) ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.