ADVERTISEMENT

ಗ್ರಾ.ಪಂ.ಗೆ ಹಳ್ಳಿಗಳ ಮರುಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 10:33 IST
Last Updated 20 ಡಿಸೆಂಬರ್ 2018, 10:33 IST
ಯಲ್ಲಾಪುರ ಪ.ಪಂ.ನಿಂದ ಹೊರಗಿಡಲಾದ ಪ್ರದೇಶಗಳನ್ನು ಪುನಃ ಗ್ರಾಮ ಪಂಚಾಯ್ತಿಗೆ ಸೇರಿಸಿಕೊಳ್ಳಬೇಕು ಎಂದು ಮನವಿ ನೀಡಲು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆಯ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದರು
ಯಲ್ಲಾಪುರ ಪ.ಪಂ.ನಿಂದ ಹೊರಗಿಡಲಾದ ಪ್ರದೇಶಗಳನ್ನು ಪುನಃ ಗ್ರಾಮ ಪಂಚಾಯ್ತಿಗೆ ಸೇರಿಸಿಕೊಳ್ಳಬೇಕು ಎಂದು ಮನವಿ ನೀಡಲು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆಯ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದರು   

ಕಾರವಾರ:ಯಲ್ಲಾಪುರ ಪಟ್ಟಣ ಪಂಚಾಯ್ತಿಯಿಂದ ಹೊರಗಿಡಲಾದ ಸಹ‌ಸ್ರಳ್ಳಿ, ಕೊಂಡೆಮನೆ, ಬಾಳಗಿಮನೆ ಹಿತ್ಲಕಾರಗದ್ದೆ ಪ್ರದೇಶಗಳನ್ನು ಪುನಃ ಗ್ರಾಮ ಪಂಚಾಯ್ತಿಗೆ ಸೇರಿಸಿಕೊಳ್ಳಬೇಕು. ಅತಂತ್ರ ಸ್ಥಿತಿಯಿಂದ ಗ್ರಾಮಸ್ಥರನ್ನು ಪಾರು ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆಯ ಪ್ರಮುಖರು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯ್ತಿಗೆ ಒಳಪಟ್ಟಿದ್ದಈ ಹಳ್ಳಿಗಳನ್ನು 2001ರಲ್ಲಿ ಠರಾವು ಮಾಡಿ ಹೊರಗಿಡಲಾಗಿತ್ತು. ಆದರೆ, ಅದಾದ ಬಳಿಕ ಯಾವುದೇ ಗ್ರಾಮ ಪಂಚಾಯ್ತಿಗಳಿಗೂ ಸೇರಿಸಿಲ್ಲ. ಇದರ ವಿರುದ್ಧ ಹೈಕೋರ್ಟ್‌ಗೆ ದೂರು ನೀಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು,2015ರ ನ.23ರಂದು ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಜಿಲ್ಲಾಧಿಕಾರಿಯು ಗ್ರಾಮ ಪಂಚಾಯ್ತಿಗಳಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದರು. ಆದರೆ, ಸರ್ಕಾರದಿಂದ ಈವರೆಗೂ ಯಾವುದೇ ಆದೇಶ ಬಂದಿಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಈ ನಾಲ್ಕು ಹಳ್ಳಿಗಳನ್ನು ಹೊರಗಿಟ್ಟು ಪಟ್ಟಣ ಪಂಚಾಯ್ತಿಗೆ ಚುನಾವಣೆ ಮಾಡಲಾಗಿದೆ. ಅತ್ತ ಪಟ್ಟಣ ಪಂಚಾಯ್ತಿಗೂ ಸೇರದೇ ಇತ್ತ ಗ್ರಾಮ ಪಂಚಾಯ್ತಿಗೂ ಒಳಪಡದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಗ್ರಾಮಸ್ಥರಿಗೆ ಸರ್ಕಾರದ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇನ್ನೊಂದು ವಾರದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಸೇರ್ಪಡೆಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೈಗಾ ವಿಸ್ತರಣೆಗೆ ವಿರೋಧ:ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಯನ್ನುಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ವಿರೋಧಿಸಿದೆ.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಘಟಕಗಳಿಂದ ಪರಿಸರಕ್ಕೆ ಹಾನಿಯಾಗಿದೆ. ಯಲ್ಲಾಪುರ ಸೇರಿದಂತೆ ಘಟ್ಟದ ಮೇಲಿನತಾಲ್ಲೂಕುಗಳ ಜನರಿಗೆ ಅಧಿಕ ತೊಂದರೆಯಾಗುವಸಾಧ್ಯತೆಯಿದೆ. ಆದ್ದರಿಂದ ನೂತನ ಘಟಕಗಳ ಸ್ಥಾಪನೆ ಮಾಡಬಾರದು ಎಂದು ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯಪ್ರಮುಖರಾದಚಿದಾನಂದ, ನಾರಾಯಣ ಸುಬ್ರಾಯ ಭಟ್ಟ, ಚೂಡಾಮಣಿ ರಾಮ ಮರಾಠಿ, ದಿನೇಶ ಎಸ್.ಮರಾಠಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.