ADVERTISEMENT

ಲೈಫ್‌ಡೌನ್ ಕಥೆಗಳು | 'ಬೆಟ್ಟದ ಜೀವ’ಗಳ ಲಾಕ್‌ಡೌನ್‌ಗೆ 40 ವರ್ಷ

ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದ ಮಚ್ಚಳ್ಳಿಯ ನಿವಾಸಿಗಳಿಗೆ ನಿತ್ಯವೂ ಸವಾಲು

ಸದಾಶಿವ ಎಂ.ಎಸ್‌.
Published 17 ಜೂನ್ 2020, 2:22 IST
Last Updated 17 ಜೂನ್ 2020, 2:22 IST
ಮಣ್ಣು ರಸ್ತೆಯಲ್ಲಿ ಮಕ್ಕಳಾಟ
ಮಣ್ಣು ರಸ್ತೆಯಲ್ಲಿ ಮಕ್ಕಳಾಟ   

ಕಾರವಾರ:ಇದು ಕಾರವಾರ ತಾಲ್ಲೂಕಿನ ಮಚ್ಚಳ್ಳಿ ಎಂಬ ಬೆಟ್ಟದ ಮೇಲಿರುವ ಪುಟ್ಟ ಊರಿನ ಕಥೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಣೆಗೂ ಮೊದಲು ಮತ್ತು ಈಗ ಅವರ ಜೀವನ ಹೇಗಿದೆ ಎಂಬುದನ್ನು ಅರಿತುಕೊಳ್ಳಲು ‘ಪ್ರಜಾವಾಣಿ’ ತಂಡ ಅಲ್ಲಿಗೆ ಭೇಟಿ ನೀಡಿತ್ತು. ದಟ್ಟ ಕಾಡಿನ ನಡುವೆ, ಕಡಿದಾಗಿ ಸಾಗುವ ದಾರಿಯ ರೀತಿಯಲ್ಲೇ ಅವರ ಜೀವನವೂ ಮುಂದುವರಿದಿದೆ. ಆದರೂ ಇಲ್ಲಿದ್ದುಕೊಂಡೇ ಜೀವನ ಸಾಗಿಸುತ್ತೇವೆ ಎನ್ನುವ ಅವರ ಛಲದ ಮುಂದೆ ಎಂಥ ಕಷ್ಟಗಳೂ ನಗಣ್ಯ ಎಂದು ಕಾಣುತ್ತವೆ.

‘ಬೆಟ್ಟದ ಮೇಲೆ ಇದ್ದೇವೆ ಸಾರ್. ಇಲ್ಲಿಗೆ ಬರ್ಲಿಕ್ಕೆ ರಸ್ತೆಯಿಲ್ಲ. ಮೇನ್ ರೋಡಿಗೆ ಹೋಗ್ಲಿಕ್ಕೆ ಬರ್ಲಿಕ್ಕೆ ಮುಕ್ಕಾಲು ತಾಸು (ಸುಮಾರುನಾಲ್ಕುಕಿಲೋಮೀಟರ್) ಬೇಕು. ಹುಷಾರಿಲ್ಲದವ್ರನ್ನು, ಗರ್ಭಿಣಿಯರನ್ನು ಹೊತ್ಕೊಂಡೇ ಮುದಗಾಕ್ಕೆ ಹೋಗ್ತೇವೆ. ಇಲ್ಲಿದ್ದ ಶಾಲೆ ಕೂಡ ನಾಕೈದು ವರ್ಷದ ಹಿಂದೆ ಮುಚ್ಚಿದೆ. ಇಷ್ಟು ಬಿಟ್ರೆ ಮತ್ತೇನೂ ಸಮಸ್ಯೆಯಿಲ್ಲ...’

ಕಾರವಾರ ತಾಲ್ಲೂಕಿನ ಮಚ್ಚಳ್ಳಿ ಎಂಬ ‘ಬೆಟ್ಟದೂರಿ’ನ ಯುವಕ ರೇಣು ನಾರಾಯಣ ಗೌಡ ಹೀಗೆ ಹೇಳುತ್ತ ನಸು ನಕ್ಕಾಗ ಇಲ್ಲಿನವರು ಸಮಸ್ಯೆಗಳಿಗೆ ಅದೆಷ್ಟು ಹೊಂದಿಕೊಂಡಿದ್ದಾರೆ ಅನಿಸುತ್ತದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 66ರಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಈ ಪುಟ್ಟ ಊರಿನಲ್ಲಿ 13 ಮನೆಗಳಿವೆ. ಸುಮಾರು 60 ಜನರಿದ್ದಾರೆ. ಈ ಊರಿಗೆ ಎರಡು ಕಾಲುದಾರಿಗಳಿವೆ. ಗ್ರಾಮ ಕೇಂದ್ರ ಅಮದಳ್ಳಿಗೆಸಮೀಪದ,ಬೆಟ್ಟದ ಬುಡದಲ್ಲಿರುವ ಮುದಗಾಕ್ಕೆ ಬಂದರೆ ಕಾರವಾರ ಸುಮಾರು 25 ಕಿಲೋಮೀಟರ್ ಆಗುತ್ತದೆ.

ಬೆಟ್ಟದ ಮತ್ತೊಂದು ತಪ್ಪಲಿನಲ್ಲಿರುವದೇವಳಮಕ್ಕಿ ಗ್ರಾಮದ ನಗೆ ಎಂಬ ಊರಿನ ಕಡೆಯಿಂದಲೂ ದಟ್ಟಾರಣ್ಯದ ನಡುವೆ ಕಾಲುದಾರಿಯಿದೆ. ಇಲ್ಲಿಂದ ಮಚ್ಚಳ್ಳಿ ಸುಮಾರು ಐದು ಕಿಲೋಮೀಟರ್ ದೂರವಿದೆ. ಬೆಟ್ಟದ ಬುಡದಿಂದ ನಡಿಗೆ ಶುರು ಮಾಡಿದರೆ ಆ ಊರಿನವರಿಗೇಸುಮಾರು ಒಂದೂವರೆ ತಾಸು ಬೇಕು. ಇಲ್ಲಿಂದ ಕಾರವಾರ ಸುಮಾರು 45 ಕಿಲೋಮೀಟರ್ ದೂರವಿದೆ. ಎರಡೂ ಕಡೆಯಲ್ಲಿಪಡಿತರ ಸೇರಿದಂತೆ ಯಾವುದೇ ವಸ್ತುಗಳನ್ನು ತರಬೇಕಿದ್ದರೂ ತಲೆ ಹೊರೆಯೇ ಗತಿ.

ನಗೆ ಗ್ರಾಮದಿಂದ ನಾವು ಬೆಟ್ಟವೇರಲು ಆರಂಭಿಸಿದಾಗ ದಾರಿಯುದ್ದಕ್ಕೂ ಜೋರಾಗಿ ಮಳೆಯೂ ಜೊತೆಯಾಯಿತು. ಹೆಜ್ಜೆ ಹೆಜ್ಜೆಗೂ ಎದುರಾಗುತ್ತಿದ್ದ ಉಂಬಳಗಳೂ ಕಾಲಿಗೇರಿ ರಕ್ತ ಹೀರಿದವು. ಕಡಿದಾದ ಬೆಟ್ಟದ ದಾರಿಯಲ್ಲಿ ಎರಡು ತಾಸುಗಳ ನಡಿಗೆಯ ಬಳಿಕ ಮಚ್ಚಳ್ಳಿ ತಲುಪಿದಾಗ ಏದುಸಿರು ಬಿಡುತ್ತಿದ್ದೆವು. ಆದರೆ, ಆ ಊರಿನ ದಾರಿಯುದ್ದಕ್ಕೂ ಭೋರ್ಗರೆಯುತ್ತ ಹರಿಯುವ ಹಳ್ಳದ ಹಾಲ್ನೊರೆ, ಮಳೆ ಹನಿಯ ಸದ್ದು, ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಜನರ ಆತ್ಮೀಯವಾದಅತಿಥಿ ಸತ್ಕಾರಆಯಾಸವನ್ನೆಲ್ಲ ಮರೆಸಿತು. ಮಚ್ಚಳ್ಳಿಗೆ ತಲುಪಿದ್ದೇವೆ ಎಂದು ಕಚೇರಿಗೆ ಕರೆ ಮಾಡಿ ಹೇಳೋಣವೆಂದು ಮೊಬೈಲ್ ತೆಗೆದು ನೋಡಿದರೆ ನೆಟ್‌ವರ್ಕ್‌ನ ಸುಳಿವಿಲ್ಲ.

‘ಇಲ್ಲಿ ಯಾವ ಸಿಗ್ನಲ್ಲೂ ಇಲ್ಲ ಸಾರ್. ಅಲ್ಲೊಂದು ಮನೆಯ ಹತ್ರ ಒಂದು ಕಡ್ಡಿ (ಸಿಗ್ನಲ್) ಬರ್ತದೆ. ಊರಿನ ಎಲ್ಲರ ಮೊಬೈಲ್ ಅಲ್ಲೇ ಇಡ್ತೇವೆ. ಎಲ್ಲರದ್ದೂ ಬೇಸಿಕ್ ಹ್ಯಾಂಡ್ ಸೆಟ್. ನಮಗೆ ಅದೇ ಸಾಕಾಗ್ತದೆ. ಮಳೆ ಬಂದಾಗ ಕೆಲವೊಮ್ಮೆ ಸಿಗ್ನಲ್ ಇರುದಿಲ್ಲ. ಆಗ ಎಂತಾದ್ರೂ ಸಮಸ್ಯೆಯಾದ್ರೆ ಯಾರಿಗಾದ್ರೂತಿಳಿಸ್ಲಿಕ್ಕೆ ಸ್ವಲ್ಪ ಕಷ್ಟಾಗ್ತದೆ. ಮತ್ತೆ ನಾವೇ ಒಂದಿಬ್ರು ಬೆಟ್ಟ ಇಳಿದು ಹೇಳಿ ಬರ್ತೇವೆ’ಎಂದು ಮತ್ತೊಂದು ‘ಸಹಜ’ವಾದ ವಿಚಾರವನ್ನು ರೇಣು ಮುಂದಿಟ್ಟರು.

‘ಉಂಬಳತುಂಬಆಗಿದ್ಯಲ್ಲ’ ಎಂದರೆ, ‘ಹಾಂ ಸಾರ್, ಸ್ವಲ್ಪ ಆಗಿದೆ. ತಂಬಾಕು ಮತ್ತು ಸುಣ್ಣವನ್ನು ಕೋಲಿಗೆ ಕಟ್ಟಿ ಹಿಡ್ಕೊಂಡು ಹೋಗ್ತೇವೆ. ಉಂಬಳ ಹತ್ತಿದಲ್ಲಿಗೆ ಮುಟ್ಟಿಸಿದ್ರೆ ಅದು ಬೀಳ್ತದೆ’ ಎಂದು ಅನುಭವ ತೆರೆದಿಟ್ಟರು.

ಕರಡಿ, ಕಾಡುಹಂದಿಗಳ ಹಾವಳಿಯಿಂದಾಗಿ ಇಲ್ಲಿ ತರಕಾರಿ ಬೆಳೆಯುವುದಿಲ್ಲ. ಲಾಕ್‌ಡೌನ್ ಘೋಷಣೆಯಾದ ಬಳಿಕ ಕಾಯಿಪಲ್ಲೆ ಸಮಸ್ಯೆ ಎದುರಾಯಿತು ಎನ್ನುತ್ತಾರೆ ಯುವಕ ಬಾಲಕೃಷ್ಣ.

‘ಮುದಗಾಕ್ಕೆ ತರಕಾರಿ ಗಾಡಿ ಬಂದಿದ್ದು ಗೊತ್ತಾಗಿ ಹೋಗ್ತಿದ್ದೆವು. ಮುಕ್ಕಾಲು ಗಂಟೆ ನಡೆದು ಬೆಟ್ಟ ಇಳಿದು ಅಲ್ಲಿಗೆ ತಲುಪುವಷ್ಟರಲ್ಲಿ ಗಾಡಿ ಹೋಗ್ತಿತ್ತು. ಬೆಟ್ಟದ ಮೇಲೆ ನಾವು ಬದುಕಿದ್ದೇವಾ ಸತ್ತಿದೇವಾ ಅಂತ ಯಾರೂಕೇಳಿಲ್ಲ. ಮೊದಲಿನಿಂದಲೂ ನಮ್ಮ ಜೀವನ ಲಾಕ್‌ಡೌನ್‌ನಲ್ಲಿ ಇದ್ದ ಹಾಗೇ ಇದೆ’ ಎಂದು ಅವರು ಮುಗುಳ್ನಗುತ್ತಲೇ ಬೇಸರ ವ್ಯಕ್ತಪಡಿಸಿದರು.

ಸೀಬರ್ಡ್ ನೌಕಾನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿನೌಕರಿ ಮಾಡುವ ಅವರು,ಲಾಕ್‌ಡೌನ್‌ನಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎನ್ನುವುದನ್ನೂ ಮರೆಯಲಿಲ್ಲ.

ಈ ಊರಿನಲ್ಲಿ ಹಾಲಕ್ಕಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಊರಿನ ಆರಂಭದಲ್ಲೇ ನರಸಿಂಹ ದೇವರ ಕಲ್ಲಿನ ವಿಗ್ರಹ, ಅದನ್ನು ದಾಟಿದರೆ ಸಿದ್ದರಾಮೇಶ್ವರ ದೇವಸ್ಥಾನವಿದೆ.ಅದರ ಆವರಣದ ಕಾಮಗಾರಿ ನಡೆಯುತ್ತಿದ್ದು, ಲಾಕ್‌ಡೌನ್ ನಿರ್ಬಂಧಗಳು ತೆರವಾದರೆ ಜಾತ್ರೆಆಯೋಜಿಸಲೂ ಗ್ರಾಮಸ್ಥರು ಆಸಕ್ತರಾಗಿದ್ದಾರೆ.

ಶಾಲೆ ಪುನಃ ತೆರೆದಿಲ್ಲ

ಮಚ್ಚಳ್ಳಿಯಲ್ಲಿಅಂಗನವಾಡಿಯಿಲ್ಲ. ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಬಾರದೇ ನಾಲ್ಕೈದು ವರ್ಷಗಳ ಹಿಂದೆ ಮುಚ್ಚಿದೆ. ಹಾಗಾಗಿ ಪಾಲಕರು ತಮ್ಮ ಕರುಳಕುಡಿಗಳನ್ನು ಬೆಟ್ಟದ ಬುಡದಲ್ಲಿರುವ ಅಮದಳ್ಳಿ, ಮುದಗಾದಲ್ಲಿರುವ ನೆಂಟರ ಮನೆಯಲ್ಲಿಟ್ಟು ಶಾಲೆಗೆ ಕಳುಹಿಸುತ್ತಿದ್ದಾರೆ.

‘ಆರಂಭದಲ್ಲಿ ಎಲ್ಲರೂ ಚೆನ್ನಾಗಿ ನೋಡಿಕೊಳ್ತಾರೆ. ಬಳಿಕ ಅವರಿಗೂ ಬೇಸರಾಗ್ತದೆ. ಮಕ್ಕಳನ್ನು ಶಾಲೆಗೆ ಕಳಿಸೋದು ಬಹಳ ತ್ರಾಸಾಗ್ತದೆ. ಶಾಲೆಯನ್ನು ಪುನಃ ಶುರು ಮಾಡಲು ಯಾರೂ ಗಮನ ಕೊಡ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಮಚ್ಚಳ್ಳಿಯ ಗೃಹಿಣಿ ಮಂಗಲಾ.

ಊರು ಹೇಗಿದೆ?

ಊರಿಗೆ ವಿದ್ಯುತ್ ಸಂಪರ್ಕವಿದೆ. ಆದರೆ, ಮಳೆಗಾಲದ ಆರಂಭ ಮತ್ತು ಕೊನೆಯಲ್ಲಿ ಗಾಳಿ ಬೀಸಿ ಮರಬಿದ್ದು ತಂತಿಗೆ, ಕಂಬಕ್ಕೆ ಹಾನಿಯಾದರೆ ದಿನಗಟ್ಟಲೆ ಚಿಮಣಿ ಬುಡ್ಡಿಯೇ ಗತಿ. ಇಟ್ಟಿಗೆ, ಚಿರೆಕಲ್ಲಿನ ಗೋಡೆಯ, ಹೆಂಚಿನ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕುಡಿಯಲು ಹಳ್ಳದ ನೀರಿದೆ. ಜಮೀನಿನ ಐದಾರು ಅಡಿಯಲ್ಲೇ ನೀರು ಸಿಗುತ್ತದೆ.

ಸಣ್ಣ ಸಣ್ಣ ಗದ್ದೆಗಳಲ್ಲಿ ವರ್ಷಕ್ಕೆ ಎರಡು ಭತ್ತದ ಬೆಳೆ ತೆಗೆಯುತ್ತಾರೆ. ಒಂದಷ್ಟು ಮಲೆನಾಡು ಗಿಡ್ಡ ಆಕಳುಗಳಿದ್ದು, ಸಾವಯವ ಗೊಬ್ಬರದ ಬಳಕೆಯಾಗುತ್ತದೆ. ಆದರೆ, ಕಟಾವು ಮಾಡಿದ ಭತ್ತವನ್ನು ಅಕ್ಕಿ ಮಾಡಿಸಲು, ಪುನಃ ತರಲು ಮತ್ತದೇ ನಡಿಗೆ ಅನಿವಾರ್ಯ.

ಮಚ್ಚಳ್ಳಿ:ಅಂಕಿ ಅಂಶ

ಮನೆಗಳು -13

ಜನಸಂಖ್ಯೆ-60

ಕೃಷಿ ಜಮೀನು-60 (ಎಕರೆ)

ಮುಖ್ಯರಸ್ತೆಯಿಂದ ಅಂತರ-5 ಕಿ.ಮೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.