ವಿಶ್ವೇಶ್ವರ ಹೆಗಡೆ ಕಾಗೇರಿ
ಶಿರಸಿ: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಅಳಿಸಿ ಹಾಕಬೇಕು ಎಂದು ನೀಡಿರುವ ಪ್ರಚೋದನಾಕಾರಿ ಹೇಳಿಕೆಗೆ ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸಚಿವರಾಗಿ ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರಮಾಣ ವಚನ ಸ್ವೀಕರಿಸಿದ ಸ್ಟಾಲಿನ್ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯು ಪ್ರಚೋದನಾಕಾರಿ ಮತ್ತು ಸಮಾಜದಲ್ಲಿ ಅಶಾಂತಿಯನ್ನು ಬಿತ್ತರಿಸುವ ನಡೆಯಾಗಿದೆ. ಸನಾತನ ಧರ್ಮವು ಕಾಲಾತೀತವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ಡಿಎಂಕೆ, ಇಂಡಿಯ ಮೈತ್ರಿ ಕೂಟದ ಪಾಲುದಾರರು. ಹೀಗಾಗಿ ಕಾಂಗ್ರೆಸ್ ಮತ್ತು ಇತರ ಮೈತ್ರಿಕೂಟದ ಪಕ್ಷಗಳು ಉದಯನಿಧಿ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಡಬೇಕು’ ಎಂದಿದ್ದಾರೆ.
‘ಇವರ ಹೇಳಿಕೆಯು ದೇಶದ ಇಡೀ ಸಮಾಜಕ್ಕೇ ಕಿಚ್ಚಿತ್ತುವ ಹೇಳಿಕೆಯಾಗಿದ್ದು ಇದನ್ನು ಮಿತ್ರ ಪಕ್ಷಗಳು ಅನುಮೋದಿಸುತ್ತಾರಾ ಎಂದು ಜನತೆಗೆ ತಿಳಿಸಬೇಕು. ಸ್ಟಾಲಿನ್ ಅವರು ತಮ್ಮ ಹೊಣೆಗೇಡಿ ಹೇಳಿಕೆಗೆ ಇಡೀ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು’ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.