ADVERTISEMENT

ಕುಮಟಾ: ಉಪ್ಪು ನೀರು ತಡೆಗೆ ಆಧುನಿಕ ತಡೆಗೋಡೆ

ಕುಮಟಾದ ಮಾಣಿಕಟ್ಟಾದಲ್ಲಿ ವಿಶ್ವಬ್ಯಾಂಕ್ ನೆರವಿನಲ್ಲಿ ಆರಂಭವಾದ ಕಾಮಗಾರಿ

ಎಂ.ಜಿ.ನಾಯ್ಕ
Published 27 ಮೇ 2021, 19:30 IST
Last Updated 27 ಮೇ 2021, 19:30 IST
ಕುಮಟಾ ತಾಲ್ಲೂಕಿನ ಕಾಗಾಲ ಗಜನಿಯಲ್ಲಿ ‘ಜೇಬಿಯನ್ ತಂತ್ರಜ್ಞಾನ’ ಬಳಸಿ ನಿರ್ಮಿಸಿರುವ 100 ಮೀಟರ್ ಉದ್ದದ ಮಾದರಿ ಉಪ್ಪು ನೀರು ತಡೆಗೋಡೆ
ಕುಮಟಾ ತಾಲ್ಲೂಕಿನ ಕಾಗಾಲ ಗಜನಿಯಲ್ಲಿ ‘ಜೇಬಿಯನ್ ತಂತ್ರಜ್ಞಾನ’ ಬಳಸಿ ನಿರ್ಮಿಸಿರುವ 100 ಮೀಟರ್ ಉದ್ದದ ಮಾದರಿ ಉಪ್ಪು ನೀರು ತಡೆಗೋಡೆ   

ಕುಮಟಾ: ಇಲ್ಲಿಯ ಅಘನಾಶಿನಿ ಹಿನ್ನೀರು ಪ್ರದೇಶದ ಮಾಣಿಕಟ್ಟಾ ಭಾಗದ ಕಗ್ಗ ಭತ್ತ ಭೂಮಿಗೆ (ಗಜನಿ) ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉಪ್ಪು ನೀರು ನುಗ್ಗಿ ಹಾಳಾಗುವುದನ್ನು ತಡೆಯಲು ಹೊಸ ತಂತ್ರಜ್ಞಾನ ಅಳವಡಿಸಿ ಈ ಕಾರ್ಯ ಮಾಡಲಾಗುತ್ತಿದೆ.

ವಿಶ್ವ ಬ್ಯಾಂಕ್‌ನಿಂದ ₹32.40 ಕೋಟಿ ಆರ್ಥಿಕ ನೆರವಿನಿಂದ, 7.8 ಕಿ.ಮೀ. ಉದ್ದದ ತಡೆಗೋಡೆ ಕಾಮಗಾರಿ ಇದಾಗಿದೆ. ಮಳೆಗಾಲದಲ್ಲಿ ವಿಶೇಷ ತಳಿಯ ಕಗ್ಗ ಭತ್ತ, ಬೇಸಿಗೆಯಲ್ಲಿ ರುಚಿಕರ ನೈಸರ್ಗಿಕ ಮೀನು, ಸಿಗಡಿ, ಏಡಿ ಸಿಗುವ ಇಲ್ಲಿಯ ಅಘನಾಶಿನಿ ಹಿನ್ನೀರು ಗಜನಿ ರಾಜ್ಯದಲ್ಲಿಯೇ ವಿಸ್ತಾರವಾಗಿದೆ. ಇಲ್ಲಿಯ ಮೀನು, ಸಿಗಡಿ ಗೋವಾ ರಾಜ್ಯಕ್ಕೆ ರವಾನೆಯಾಗುತ್ತವೆ.

ಸ್ಥಳೀಯ ‘ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘ’ದ ಅಧ್ಯಕ್ಷರಾಗಿದ್ದ ದಿ. ಸಿ.ಆರ್.ನಾಯ್ಕ, ವಿಶ್ವ ಬ್ಯಾಂಕ್ ಅಧಿಕಾರಿಗಳಿಗೆ ಕಗ್ಗ ಭತ್ತ ಹಾಗೂ ಮೀನು ಕೃಷಿ ಬಗ್ಗೆ ಮನವರಿಕೆ ಮಾಡಿದ್ದರು. ಈ ಮೂಲಕ ಹಣಕಾಸು ನೆರವು ಮಂಜೂರು ಮಾಡಲು ಶ್ರಮಿಸಿದ್ದರು.

ADVERTISEMENT

‘ಜೇಬಿಯನ್ ತಂತ್ರಜ್ಞಾನ’:

‘ಈ ಕಾಮಗಾರಿಯನ್ನು ರಾಷ್ಟ್ರೀಯ ಚಂಡಮಾರುತ ಉಪಶಮನ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಮಾಣಿಕಟ್ಟಾ ಪ್ರದೇಶದವರೆಗೆ 1.8 ಕಿ.ಮೀ.ಗಳಷ್ಟು ಭಾಗಕ್ಕೆ ಡಾಂಬರು ಅಳವಡಿಸಲಾಗುತ್ತಿದೆ. ತಡೆಗೋಡೆಯ ಮೇಲೆ ವಾಹನ ಸಂಚರಿಸುವಂತೆ ಅನುಕೂಲ ಕಲ್ಪಿಸಲಾಗುವುದು’ ಎಂದು ಕಾಮಗಾರಿ ನಿರ್ವಹಿಸುತ್ತಿರುವ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ ನಾಯ್ಕ ತಿಳಿಸಿದರು.

‘ಕಾಮಗಾರಿಯಲ್ಲಿ ಒಟ್ಟು ಎಂಟು ಗೇಟುಗಳನ್ನು ನಿರ್ಮಿಸಲಾಗುತ್ತಿದೆ. ತಡೆಗೋಡೆಯ ತಳಭಾಗದಲ್ಲಿ ಸತು, ಅಲ್ಯುಮಿನಿಯಂ ಒಳಗೊಂಡ ಪಾಲಿಮರ್ ಹೊದಿಕೆಯ ತಂತಿಯ ಬಲೆ ಅಳವಡಿಸಲಾಗಿದೆ. 150– 250 ಎಂ.ಎಂ. ಅಳತೆಯ ಶಿಲೆಕಲ್ಲುಗಳನ್ನು ತುಂಬಿ ಹಾಸಲಾಗಿದೆ. ಇದೇ ಮಾದರಿಯಲ್ಲಿ ಮೇಲ್ಭಾಗದಲ್ಲಿ ಚೌಕಾಕಾರದ ತಡೆಗೋಡೆ ನಿರ್ಮಿಸಲಾಗುವುದು. ಪರಿಸರ ಸ್ನೇಹಿಯಾಗಿರುವ ಈ ತಂತಿ ಬಲೆ ಸುಮಾರು 100 ವರ್ಷ ಬಾಳುತ್ತದೆ. ನೀರಿನ ಸೆಳೆತಕ್ಕೆ ಕಲ್ಲು ಕೊಚ್ಚಿ ಹೋಗುವುದನ್ನು ತಡೆಯುವುದರ ಜೊತೆಗೆ ಮೀನು, ಸಿಗಡಿ ಸಂತಾನಾಭಿವೃದ್ಧಿಗೆ ಸಹಕಾರಿ’ ಎಂದರು.

‘ತಂತಿ ಪದರ ಮೇಲ್ಭಾಗದಲ್ಲಿ ಜಿಯೋ ಟೆಕ್ಸ್‌ಲೈಟ್ ಫಿಲ್ಟರ್ ಬಟ್ಟೆ ಹಾಸಿ ಅದರ ಮೇಲೆ ಮಣ್ಣು ಹಾಕಲಾಗಿದೆ. ತಡೆಗೋಡೆಯ ಒಳಗೆ ನೀರು ಮಾತ್ರ ಇಳಿದು ಮಣ್ಣು ಕೊಚ್ಚಿ ಹೋಗದಂತೆ ಈ ಬಟ್ಟೆ ತಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತಂತ್ರಜ್ಞಾನದ ಒಂದು ಪುಟ್ಟ ಕಾಮಗಾರಿ ನಡೆಸಿದ್ದು ಬಿಟ್ಟರೆ ಇದು ರಾಜ್ಯದಲ್ಲಿಯೇ ಬೃಹತ್ ಕಾಮಗಾರಿಯಾಗಿದೆ’ ಎಂದು ಮಾಹಿತಿ ನೀಡಿದರು.

ಮಾದರಿ ತಡೆಗೋಡೆ ನಿರ್ಮಾಣ:

‘ಸ್ಥಳೀಯರಿಗೆ ಕಾಮಗಾರಿ ಬಗ್ಗೆ ಮನವರಿಕೆ ಮಾಡುವ ಉದ್ದೇಶದಿಂದ ಕಾಗಾಲ ಬಳಿ 100 ಮೀಟರ್ ಉದ್ದದ ತಡೆಗೋಡೆಯ ಮಾದರಿಯನ್ನು ನಿರ್ಮಿಸಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

‘ಮಾದರಿ ತಡೆಗೋಡೆಯನ್ನು ನೋಡಿ ಮುಂದೆ ಪೂರ್ತಿ ಕಾಮಗಾರಿ ಹೇಗೆ ನಡೆಯುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯ. ಕಾಮಗಾರಿಯಲ್ಲಿ ಕೊಂಚ ವ್ಯತ್ಯಾಸವಾದರೂ ಮಾದರಿ ಕಾಮಗಾರಿಗೆ ಹೋಲಿಸಿ ಸಾರ್ವಜನಿಕರು ಪ್ರಶ್ನಿಸಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.