ADVERTISEMENT

ಕಾರವಾರ: ಸರ್ಕಾರಿ ಕಚೇರಿಯೊಳಗೆ ‘ಸೋರಿಕೆ’ಯ ಕೊರಗು

ಗಣಪತಿ ಹೆಗಡೆ
Published 29 ಜುಲೈ 2024, 4:48 IST
Last Updated 29 ಜುಲೈ 2024, 4:48 IST
ಅಂಕೋಲಾ ತಾಲ್ಲೂಕಿನ ಬೆಳಸೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೊಠಡಿಯೊಂದರಲ್ಲಿ ನೀರು ಸೋರಿಕೆಯಾಗಿ ಗೋಡೆ ಶಿಥಿಲವಾಗಿರುವುದು
ಅಂಕೋಲಾ ತಾಲ್ಲೂಕಿನ ಬೆಳಸೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೊಠಡಿಯೊಂದರಲ್ಲಿ ನೀರು ಸೋರಿಕೆಯಾಗಿ ಗೋಡೆ ಶಿಥಿಲವಾಗಿರುವುದು   

ಕಾರವಾರ: ಮಳೆ ಪ್ರಮಾಣ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಮಳೆಯನ್ನು ತಡೆದುಕೊಳ್ಳಬಹುದಾದಷ್ಟು ಸುರಕ್ಷಿತ ಸರ್ಕಾರಿ ಕಟ್ಟಡ ನಿರ್ಮಿಸಲಾಗುತ್ತಿಲ್ಲ ಎಂಬ ದೂರುಗಳು ಹೆಚ್ಚಿವೆ. ಮಳೆನೀರು ಸೋರಿಕೆಯಿಂದ ಒದ್ದೆಯಾಗುತ್ತಿರುವ ಕಟ್ಟಡಗಳು ಈ ಆರೋಪಗಳನ್ನು ಸಾಕ್ಷೀಕರಿಸತೊಡಗಿವೆ.

ತೀರಾ ಈಚಿನ ವರ್ಷದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲೇ ಸೋರಿಕೆ ಸಮಸ್ಯೆ ಹೆಚ್ಚುತ್ತಿದೆ. ಅವುಗಳಲ್ಲಿ ವಿದ್ಯಾರ್ಥಿ ವಸತಿ ನಿಲಯಗಳು, ವಸತಿ ಶಾಲೆಗಳು, ಆಸ್ಪತ್ರೆ, ತಾಲ್ಲೂಕು ಮಟ್ಟದ ಕಚೇರಿಗಳು ಸೇರಿವೆ. ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯ ಭವನಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಕಾರವಾರದ ತಹಶೀಲ್ದಾರ್‌ ಕಚೇರಿಯ ಮೊದಲ ಮಹಡಿಯಲ್ಲಿ ಮಳೆನೀರು ಸೋರಿಕೆ ಸಮಸ್ಯೆ ವಿಪರೀತವಾಗಿದೆ. ಜೋರು ಮಳೆಯಲ್ಲಿ ಒಳ ಆವರಣದಲ್ಲೆಲ್ಲ ನೀರು ತುಂಬಿಕೊಂಡು ಸಿಬ್ಬಂದಿಯ ಓಡಾಟಕ್ಕೆ ಸಮಸ್ಯೆ ಉಂಟಾಗುತ್ತಿದೆ. ನಿರ್ಮಿತಿ ಕೇಂದ್ರ ಸೇರಿದಂತೆ ಜಿಲ್ಲಾಮಟ್ಟದ ಕೆಲ ಕಚೇರಿಗಳ ಚಾವಣಿಯಲ್ಲಿ ನೀರು ಇಂಗುತ್ತಿದ್ದು ಕಡತಗಳು ಒದ್ದೆಯಾಗಿ ಹಾಳಾಗುತ್ತಿರುವ ದೂರುಗಳಿವೆ.

ADVERTISEMENT

ಮುಂಡಗೋಡ ತಾಲ್ಲೂಕಿನಲ್ಲಿ ನಿರಂತರ ಮಳೆಗೆ ಕೆಲವು ಸರ್ಕಾರಿ ಕಟ್ಟಡಗಳು, ಶಾಲೆ, ಅಂಗನವಾಡಿಗಳು ಸೋರುತ್ತಿವೆ. ಇಲ್ಲಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೊಠಡಿಯು ಮಳೆಗಾಲದಲ್ಲಿ ಸೋರುತ್ತಿದೆ.

ಮಳೆ ನೀರು ಬೀಳುವ ಸ್ಥಳದಲ್ಲಿ ಪಾತ್ರೆಗಳನ್ನಿಟ್ಟು ಪಕ್ಕಕ್ಕೆ ಅಧಿಕಾರಿ, ಸಿಬ್ಬಂದಿ ಕುಳಿತುಕೊಂಡಿರುತ್ತಾರೆ. ಕಚೇರಿ ಒಳಗಡೆ ಇರುವ ಪ್ಯಾಸೇಜ್‌ನಲ್ಲಿಯೂ ಸಹ ಮಳೆಯ ಹನಿ ಬೀಳುತ್ತಿರುತ್ತಿದೆ. ಕೆಲವೊಂದು ಇಲಾಖೆಗಳ ಕಟ್ಟಡಗಳು ಹಳೆಯದಾಗಿದ್ದು, ಪ್ರತಿ ವರ್ಷ ಅವುಗಳ ಚಾವಣಿ ದುರಸ್ತಿ ಮಾಡಿಸುತ್ತಾರೆ. ಆದರೂ, ಮಳೆಯ ನೀರು ಒಳಗೆ ಸೋರುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಯಲ್ಲಾಪುರ ಪಟ್ಟಣದ ಹಳೆ ತಹಶೀಲ್ದಾರ್‌ ಕಚೇರಿ ಮತ್ತು ನೂತನ ನಗರದ ಉರ್ದು ಶಾಲೆಯ ಕಟ್ಟಡ ಸೋರುತ್ತಿರುವ ದೂರುಗಳಿವೆ. ಹಳೆ ತಹಶೀಲ್ದಾರ್ ಕಟ್ಟಡದಲ್ಲಿ ಸದ್ಯ ಅಬಕಾರಿ ಇಲಾಖೆ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು ಕಟ್ಟಡದ ಅನೇಕ ಕಡೆ ನೀರು ಸೋರುತ್ತಿದೆ.

ಅಂಕೋಲಾ ತಾಲ್ಲೂಕಿನ ಬಹುತೇಕ ಸರ್ಕಾರಿ ಕಚೇರಿ ಕಟ್ಟಡಗಳು ಬಿರುಕು ಬಿಟ್ಟು ಸೋರಿಕೆಯಾಗುತ್ತಿವೆ. ತಹಶೀಲ್ದಾರ್ ಕಚೇರಿಯ ಹತ್ತಿರದ ಕಂದಾಯ ಇಲಾಖೆಯ ಕಟ್ಟಡದ ಒಳಗೆ ಮಳೆಯ ನೀರು ಸೋರಿಕೆಯಾಗುತ್ತಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ಕಿರಿಕಿರಿ ಹುಟ್ಟಿಸಿದೆ.

ಬಸ್ ನಿಲ್ದಾಣದ ಮುಂದೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಮಾಡಲಾಗಿರುವ ಕಟ್ಟಡಗಳು ಜೋರಾಗಿ ಮಳೆಯಾದರೆ ಮಳೆಯ ನೀರು ಒಳಗೆ ಬರುವ ಕಾರಣ ಕುಳಿತುಕೊಳ್ಳಲಾಗದ ಸ್ಥಿತಿ ಇದೆ. ಪುರಸಭೆಯ ಸಮಾಜ ಮಂದಿರ, ಗ್ರಾಮೀಣ ಬಾಗದ ಬಹುತೇಕ ಶಾಲೆಯ ಕಟ್ಟಡಗಳಲ್ಲಿ ಮಳೆಯ ಸೋರಿಕೆಯಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ಹಳೆಯ ಕಾಲದ ಹಲವು ಸರ್ಕಾರಿ ಕಚೇರಿಗಳು ಈ ವರ್ಷದ ಅತಿವೃಷ್ಟಿಯಿಂದ ಇನ್ನಷ್ಟು ಸೋರಲಾರಂಭಿಸಿವೆ. ಅಂಗನವಾಡಿ, ಶಾಲೆಗಳು ಸೇರಿದಂತೆ 22 ಕಟ್ಟಡಗಳ ದುರಸ್ತಿಗೆ ತಾಲ್ಲೂಕು ಪಂಚಾಯಿತಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ತಾಲ್ಲೂಕು ಪಂಚಾಯಿತಿ ಕಟ್ಟಡ ಪ್ರವೇಶದ್ವಾರದಲ್ಲೇ ಸೋರುತ್ತಿದ್ದು ಅಲ್ಲಿಗೆ ಬರುವ ಜನರು, ನೌಕರರು ಹೈರಾಣಾಗಿದ್ದಾರೆ. ವಾಹನ ನಿಲುಗಡೆಗೆ ಕೂಡ ಇಲ್ಲಿ ಜಾಗವಿಲ್ಲವಾಗಿದೆ.

ಜಲವಳ್ಳಿ, ಕಡ್ಲೆ, ಚಂದಾವರ, ನವಿಲಗೋಣ, ಕೊಡಾಣಿ, ಮೇಲಿನ ಇಡಗುಂಜಿ ಮೊದಲಾದೆಡೆಗಳಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಹಳೆಯದಾಗಿದೆ. ಕಡತೋಕಾದಲ್ಲಿ ಗ್ರಾಮ ಚಾವಡಿ, ಗುಂಡಿಬೈಲ್‌ನಲ್ಲಿ ಶಾಲೆಯ ಅಡುಗೆ ಕೋಣೆ ಸೋರುತ್ತಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ದೂರಿದ್ದಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಮಳೆಗಾಲದ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿರುವುದು 
ಕುಮಟಾ ಮಿನಿ ವಿಧಾನಸೌಧ ಕಟ್ಟಡದೊಳಗೆ ಸೋರಿದ ಮಳೆನೀರನ್ನು ನೌಕರರೊಬ್ಬರು ಶುಚಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು 
ಗ್ರಾಮ ಪಂಚಾಯಿತಿ ಕಟ್ಟಡ ಹಳೆಯದಾಗಿದ್ದು ಇದನ್ನು ಪುನರ್ ನಿರ್ಮಿಸಲು ಜಾಗದ ಕೊರತೆ ಇದೆ. ಹಳೆಯ ಇಕ್ಕಟ್ಟಾದ ಕಟ್ಟಡದಲ್ಲೇ ಸಭೆ ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲ ಕೆಲಸ- ಕಾರ್ಯ ನಡೆಯಬೇಕಿದೆ.
ಸಾವಿತ್ರಿ ಭಟ್ಟ ಕಡತೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಬಹುತೇಕ ವಿದ್ಯಾರ್ಥಿ ವಸತಿ ನಿಲಯಗಳು ವಸತಿ ಶಾಲೆಗಳಲ್ಲಿ ಮಳೆನೀರು ಸೋರಿಕೆ ಸಮಸ್ಯೆ ಇದೆ. ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಗಮನಹರಿಸಬೇಕು.
ವಿಶ್ವನಾಥ ನಾಯ್ಕ ಕಾರವಾರ ಸಾಮಾಜಿಕ ಕಾರ್ಯಕರ್ತ
ಮಿನಿ ವಿಧಾನಸೌಧ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರಗೊಳ್ಳಲಿದ್ದು ಅದಕ್ಕಾಗಿ ಹಳೆಯ ಕಟ್ಟಡ ದುರಸ್ತಿಗೆ ಮುಂದಾಗಿಲ್ಲ.
ಎನ್.ಎಫ್.ನೊರ‍್ಹೋನಾ ಕಾರವಾರ ತಹಶೀಲ್ದಾರ್
ಸೋರುವ ಆರೋಗ್ಯ ಕೇಂದ್ರ ಕಟ್ಟಡ
ಶಿರಸಿ ತಾಲ್ಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರವು ಮಳೆಗೆ ಸೋರುತ್ತಿದ್ದು ವೈದ್ಯರು ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 50 ವರ್ಷ ಹಳೆಯದಾದ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಎಲ್ಲ ಕಡೆಗಳಲ್ಲಿ ಸೋರುತ್ತಿದೆ. ವೈದ್ಯಾಧಿಕಾರಿಗಳ ಕೊಠಡಿ ರೋಗಿಗಳು ಕುಳಿತುಕೊಳ್ಳುವ ಆಸ್ಪತ್ರೆಯ ಆವರಣ ವಾರ್ಡ್‍ನ ಕೋಣೆಯ ಮುಂಭಾಗದಲ್ಲಿ ಮಳೆ ನೀರು ಸೋರುತ್ತಿದೆ. ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯ ನಾಗರಾಜ ನಾಯ್ಕ ದೂರಿದರು. ‘ಸಮಸ್ಯೆಯನ್ನು ಶಾಸಕರು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಜಯಶ್ರೀ ಹೆಗಡೆ ಪ್ರತಿಕ್ರಿಯಿಸಿದರು.
ನೀರು ಸಂಗ್ರಹಕ್ಕೆ ಬಕೆಟ್
ಜೊಯಿಡಾ ತಾಲ್ಲೂಕಿನಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಕಟ್ಟಡ ಹಳತಾಗಿದೆ. ತಹಶೀಲ್ದಾರ್ ಕಚೇರಿ ಪೊಲೀಸ್ ಠಾಣೆ ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಕೆಲ ಇಲಾಖೆಗಳ ಕಟ್ಟಡಗಳು ಮಳೆಗೆ ಸೋರುತ್ತಿವೆ. ತಹಶೀಲ್ದಾರ್‌ ಕಚೇರಿಯಲ್ಲಿ ಸಿಬ್ಬಂದಿ ಕುಳಿತು ಕೆಲಸ ಮಾಡಲಾಗದ ಸ್ಥಿತಿ ಇದೆ. ಈಚೆಗೆ ನಿರ್ಮಾಣವಾದ ತಾಲ್ಲೂಕು ಆಸ್ಪತ್ರೆಯ ಕಟ್ಟಡ ಸೋರುತ್ತಿದ್ದು ರೋಗಿಗಳ ವಾರ್ಡ್‍ನ ಕಾರಿಡಾರ್‌ನಲ್ಲಿ ಸೋರುತ್ತಿರುವ ನೀರಿಗಾಗಿ ಬಕೆಟ್‍ಗಳನ್ನು ಇಡಲಾಗಿದೆ. ಪೊಲೀಸ್ ಠಾಣೆಯ ದುರಸ್ತಿ ಕಾರ್ಯ ಈಚೆಗೆ ನಡೆದಿದ್ದು ಅಲ್ಲಿಯೂ ಸೋರುತ್ತಿದೆ. ಕಳೆದ ವರ್ಷವೇ ಉದ್ಘಾಟನೆ ಆಗಿದ್ದ ಬಾಬು ಜಗಜೀವನರಾಮ್ ಭವನ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿರುವ ಶಾಲಾ ಕಟ್ಟಡಗಳು ಸೋರುತ್ತಿವೆ. ಹೊಸದಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರ ಮಾಡಬೇಕಿರುವುದರಿಂದ ಕಚೇರಿ ಕಟ್ಟಡ ದುರಸ್ತಿ ಮಾಡಿಲ್ಲ’ ಎನ್ನುತ್ತಾರೆ ತಹಶೀಲ್ದಾರ್‌ ಕಚೇರಿಯ ಸಿಬ್ಬಂದಿ
ಬಳಕೆಯಾದ ಒಂದೇ ವರ್ಷಕ್ಕೆ ಸೋರಿಕೆ
ಕುಮಟಾ ಪಟ್ಟಣದಲ್ಲಿ ಸುಮಾರು ₹14 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಕುಮಟಾ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಮಳೆ ನೀರು ಸೋರಿಕೆ ಉಂಟಾಗಿದೆ. ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಕಟ್ಟಡವನ್ನು ಒಂದು ವರ್ಷದ ಹಿಂದೆ ಕಂದಾಯ ಇಲಾಖೆ ವಹಿಸಿಕೊಂಡಿದೆ. ಆರು ತಿಂಗಳ ಹಿಂದೆ ನಿರ್ಮಾಣ ಸಂಸ್ಥೆಯ ಕಟ್ಟಡ ನಿರ್ವಹಣಾ ಅವಧಿ ಮುಗಿದಿದೆ. ಪಟ್ಟಣದ ಕೋರ್ಟ್ ಪಕ್ಕದಲ್ಲಿರುವ ಪುರಸಭೆ ವಚನಾಲಯ ಕಟ್ಟಡ ಸಹ ಸೋರುತ್ತಿದೆ. ‘ಲೋಕೋಪಯೋಗಿ ಇಲಾಖೆ ಇಲಾಖೆ ಅಧಿಕಾರಿಗಳು ಸೂಚಿಸಿದರೂ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ಇದುವರೆಗೂ ಭೇಟಿ ನೀಡಿ ಪರಿಶೀಲನೆ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ’ ಎಂದು ಪ್ರಭಾರ ತಹಶೀಲ್ದಾರ್ ಸತೀಶ ಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.