ಮುಂಡಗೋಡ: ಮುಂಗಾರು ಮಳೆ ಬೀಳುವ ಪೂರ್ವದಲ್ಲಿಯೇ ಸುರಿದ ಬಿರುಸಿನ ಮಳೆಯನ್ನು ನಂಬಿ ಬಿತ್ತಿದ ಗದ್ದೆಗಳಿಗೆ ಈಗ ನೀರಿನ ಕೊರತೆ ಎದುರಾಗಿದೆ. ಬಿತ್ತನೆಗೂ ಮುನ್ನ ಬಿಟ್ಟು ಬಿಡದೇ ಸುರಿದ ಮಳೆಯು, ನಂತರದ ದಿನಗಳಲ್ಲಿ ಮಾಯವಾಗಿರುವುದರಿಂದ, ಗೇಣುದ್ದ ಬೆಳೆದ ಭತ್ತ ಹಾಗೂ ಗೋವಿನಜೋಳ ಸಸಿಗಳಿಗೆ ನೀರು ಹಾಯಿಸುವುದು ಅನಿವಾರ್ಯವಾಗಿದೆ.
ತಾಲ್ಲೂಕಿನ ಕೆಲವೆಡೆ ಒಣಬಿತ್ತನೆ ಮಾಡಿದ್ದ ರೈತರು, ಮಳೆಗಾಗಿ ಕಾಯುತ್ತಿದ್ದರೆ, ಗದ್ದೆ ಹಸಿಯಾಗುವಷ್ಟು ಮಳೆಯಾದರೆ ಸಾಕು, ಬಿತ್ತನೆ ಮಾಡಿದರಾಯಿತು ಎಂದು ಹಲವು ರೈತರು ಎದುರು ನೋಡುತ್ತಿದ್ದಾರೆ. ಬಿತ್ತಿದ ಬೆಳೆಗೂ, ಬಿತ್ತನೆ ಮಾಡಲಿಕ್ಕೂ ಈಗ ಮಳೆ ಅವಶ್ಯಕತೆಯಿದೆ. ಕಳೆದ ವರ್ಷ ಧಾರಾಕಾರವಾಗಿ ಸುರಿದ ಮಳೆಯಿಂದ ಗೋವಿನಜೋಳವು ಅಷ್ಟಾಗಿ ರೈತರ ಕೈಹಿಡಿಯಲಿಲ್ಲ. ಇದರಿಂದ, ಈ ವರ್ಷ ಮತ್ತೆ ಹೆಚ್ಚಿನ ಮಳೆಯಾಗಬಹುದು ಎಂದು, ಹಲವು ರೈತರು ಭತ್ತದ ಕಡೆ ಮುಖ ಮಾಡಿರುವುದು ಸಹ ಕಂಡುಬಂದಿದೆ. ಕೆಲವು ದಿನಗಳ ಹಿಂದೆ, ವೇಗ ಪಡೆದುಕೊಂಡಿದ್ದ ಬಿತ್ತನೆ ಕಾರ್ಯಕ್ಕೆ ಈಗ ಹಿನ್ನಡೆಯಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ತಾಲ್ಲೂಕಿನ ಕೆಲವೆಡೆ 10ರಿಂದ 15ದಿನಗಳ ಭತ್ತ ಹಾಗೂ ಗೋವಿನಜೋಳ ಸಸಿಗಳು ಬೆಳೆದಿದ್ದು, ಅವುಗಳಿಗೆ ನೀರಿನ ಅಗತ್ಯವಿದೆ. ನೀರಾವರಿ ಸೌಲಭ್ಯ ಇರುವ ರೈತರು, ಸ್ಪ್ರಿಂಕ್ಲರ್ ಜೆಟ್ ಮೂಲಕ ಗದ್ದೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಬೆಳೆದ ಸಸಿಗಳನ್ನು ಪೋಷಿಸಲು, ನೀರು ಹಾಯಿಸುವುದು ಅನಿವಾರ್ಯವಾಗಿದೆ. ನೀರಾವರಿ ಸೌಲಭ್ಯ ಇಲ್ಲದ ರೈತರು ಮಾತ್ರ ಇಂದು, ನಾಳೆ ಮಳೆಯಾದರೆ ಒಳಿತು ಎನ್ನುತ್ತ ಆಗಸದತ್ತ ಮುಖ ಮಾಡುತ್ತಿದ್ದಾರೆ.
‘ಮುಂಗಾರು ಮಳೆ ಬರುವ ಮುಂಚೆಯೇ ಗೋವಿನಜೋಳ ಬಿತ್ತಲಾಗಿತ್ತು. ಸತತ ಮಳೆಗೆ ಬೀಜಗಳು ತೇಲಿಕೊಂಡು ಹೋಗಿರಬಹುದು ಎಂದುಕೊಂಡಿದ್ದೆ. ಆದರೆ, ಶೇ10ರಿಂದ 20ರಷ್ಟು ಮಾತ್ರ ಬೀಜಗಳು ಹುಟ್ಟಿಲ್ಲ. ಉಳಿದ ಕಡೆ ಬೆಳೆ ಬಂದಿದೆ. ಆದರೆ, ಈಗ ಮಳೆಯ ಅವಶ್ಯಕತೆಯಿದೆ. ಜೂನ್ ತಿಂಗಳ ಆರಂಭದಲ್ಲಿಯೇ ಬಿರು ಬಿಸಿಲಿನ ವಾತಾವರಣ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅನಿವಾರ್ಯವಾಗಿ ಸ್ಪ್ರಿಂಕ್ಲರ್ ಜೆಟ್ ಮೂಲಕ ನೀರು ಹರಿಸಲಾಗುತ್ತಿದೆ. ಒಂದೆರೆಡು ಮಳೆಯಾದರೆ ಮಾತ್ರ ಬೆಳೆಗೆ ಅನುಕೂಲವಾಗುತ್ತದೆʼ ಎಂದು ರೈತ ಫಕ್ಕೀರಪ್ಪ ಅಂತೋಜಿ ಹೇಳಿದರು.
‘ಮೋಡ ಕವಿದ ವಾತಾವರಣ ನಂಬಿ ಟ್ರ್ಯಾಕ್ಟರ್ ಕೂರಿಗೆ ಬಳಸಿ ಭತ್ತ ಬಿತ್ತನೆ ಮಾಡಲಾಗಿದೆ. ಬಿತ್ತಿದ ನಂತರ ಹನಿಗಳ ಲೆಕ್ಕದಲ್ಲಿ ಮಳೆ ಬಂದ ಹಾಗೆ ಆಗುತ್ತಿದೆಯೇ ಹೊರತು ಗದ್ದೆ ತೊಯ್ಯುವಷ್ಟು ಮಳೆ ಆಗುತ್ತಿಲ್ಲ. ಎತ್ತುಗಳ ಕೂರಿಗೆ ಬಳಸಿ ಬಿತ್ತಿದರೆ, ಬಿತ್ತನೆ ತಡವಾಗಬಹುದು’ ಎಂದು ಬಹುತೇಕ ರೈತರು ಟ್ರ್ಯಾಕ್ಟರ್ ಕೂರಿಗೆ ಬಳಸುತ್ತಿದ್ದಾರೆ. ಪುರಸೊತ್ತಿಲ್ಲದಂತೆ ಬಿತ್ತನೆ ಕಾರ್ಯವೂ ನಡೆಯುತ್ತಿದೆ. ಆದರೆ, ಆರಂಭದಲ್ಲಿಯೇ ವರುಣ ಮುನಿಸಿಕೊಂಡಿರುವುದರಿಂದ ಮುಂದಿನ ಬೆಳೆಯ ಬಗ್ಗೆ ಚಿಂತಿಸುವಂತಾಗಿದೆ. ಓಡುವ ಮೋಡಗಳು ಅಲ್ಲಲ್ಲಿ ತೋರಿಕೆಗೆ ಹನಿ ಸುರಿಸುತ್ತ, ಮಳೆಗಾಲದ ಇರುವಿಕೆಯನ್ನು ತೋರಿಸುತ್ತಿವೆ. ಆದರೆ, ಪೂರ್ಣ ಪ್ರಮಾಣದ ಮಳೆ ಆಗದಿರುವುದು ನಿರಾಸೆ ಮೂಡಿಸುತ್ತಿದೆʼ ಎನ್ನುತ್ತಾರೆ ರೈತ ಬಾಬುರಾವ್ ವಾಲ್ಮೀಕಿ.
ಶೇ50ರಿಂದ 60ರಷ್ಟು ಬಿತ್ತನೆ
‘ತಾಲ್ಲೂಕಿನಲ್ಲಿ ಶೇ50ರಿಂದ 60ರಷ್ಟು ಬಿತ್ತನೆ ನಡೆದಿದೆ. ಗದ್ದೆಗಳಿಗೆ ಸದ್ಯ ನೀರಿನ ಅಗತ್ಯವಿದ್ದು ಮಳೆಯ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭತ್ತ ಬೆಳೆಯುವ ರೈತರ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದೆ. ಕೆಲವೆಡೆ ಬೆಳೆಗಳಿಗೆ ನೀರು ಹಾಯಿಸುತ್ತಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕೃಷಿ ಚಟುವಟಿಕೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆʼ ಎಂದು ಸಹಾಯಕ ಕೃಷಿ ನಿರ್ದೇಶಕ ಕೃಷ್ಣಪ್ಪ ಮಹಾರೆಡ್ಡಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.