
ಶಿರಸಿ: ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆಗೆ ಉತ್ತಮ ದರ ಲಭಿಸುತ್ತಿರುವುದು ತಾಲ್ಲೂಕಿನ ಪೂರ್ವ ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಮುಖವಾಗಿ ಮಾರಿಕಾಂಬಾ ಜಾತ್ರೆಯು ಕಲ್ಲಂಗಡಿ ಬೆಳೆಗಾರರಿಗೆ ವರದಾನವಾಗಿ ಪರಿಣಮಿಸಿದ್ದು, ಕಳೆದ ವರ್ಷದ ನಷ್ಟವನ್ನು ಮರೆತು ರೈತರು ಲಾಭದ ಹಾದಿಯಲ್ಲಿದ್ದಾರೆ.
ತಾಲ್ಲೂಕಿನ ಬನವಾಸಿ, ಗುಡ್ನಾಪುರ, ತಿಗಣಿ, ಬಾಶಿ, ನರೂರು, ಅಜ್ಜರಣಿ, ಮಧುವಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಮಾರು 120 ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಕಲ್ಲಂಗಡಿ ಬೆಳೆಯಲಾಗಿದೆ. ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬಲಿತ ಹಣ್ಣುಗಳು ಗದ್ದೆಯಲ್ಲೇ ಕೊಳೆತು ರೈತರು ಅಸಲು ಕೂಡ ಸಿಗದೇ ಕೈಸುಟ್ಟುಕೊಂಡಿದ್ದರು. ಆದರೆ, ಈ ಬಾರಿ ಭೂಮಿಗೆ ಸಿಕ್ಕ ಹದ ಮತ್ತು ಮಾರುಕಟ್ಟೆಯಲ್ಲಿನ ಬೇಡಿಕೆ ಕಂಡು ರೈತರು ಮತ್ತೆ ಕಲ್ಲಂಗಡಿಯತ್ತ ಆಸಕ್ತಿ ತೋರಿದ್ದಾರೆ.
'ಈ ಬಾರಿ ಕಲ್ಲಂಗಡಿ ಹೂವು ಕಚ್ಚುವ ಸಮಯದಲ್ಲಿ ಅಧಿಕ ಚಳಿ ಬಿದ್ದ ಕಾರಣ ಇಳುವರಿಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೂ ಸಹ, ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ ₹18 ರಿಂದ ₹20 ದರವಿದ್ದು, ಉತ್ತಮ ದರ ಸಿಗುತ್ತಿರುವುದು ಇಳುವರಿ ಕುಸಿತದ ಆತಂಕವನ್ನು ದೂರ ಮಾಡಿ ರೈತರಿಗೆ ನೆಮ್ಮದಿ ತಂದಿದೆ' ಎನ್ನುತ್ತಾರೆ ಬೆಳೆಗಾರ ಅಂಡಗಿಯ ಸುದರ್ಶನ ನಾಯ್ಕ.
'ಕಲ್ಲಂಗಡಿ ಕೇವಲ 70 ದಿನಗಳ ಬೆಳೆಯಾಗಿದ್ದು, ಒಂದು ಎಕರೆಗೆ ಅಂದಾಜು ₹60 ಸಾವಿರದಿಂದ ₹70 ಸಾವಿರ ಖರ್ಚು ತಗಲುತ್ತದೆ. ಉತ್ತಮ ಫಸಲು ಬಂದರೆ ಎರಡರಿಂದ ಎರಡುವರೆ ಲಕ್ಷ ರೂಪಾಯಿವರೆಗೂ ಆದಾಯ ಗಳಿಸಲು ಸಾಧ್ಯವಿದೆ. ತೋಟಗಾರಿಕಾ ಇಲಾಖೆಯು ಸಹ ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು, ಬೀಜ ಹಾಗೂ ಗೊಬ್ಬರಕ್ಕೆ ₹9,400 ಮತ್ತು ಪ್ಲಾಸ್ಟಿಕ್ ಹೊದಿಕೆಗೆ ₹8,000 ಸಹಾಯಧನ ನೀಡುತ್ತಿದೆ. ಇದು ರೈತರಿಗೆ ಆರ್ಥಿಕವಾಗಿ ಬೆನ್ನೆಲುಬಾಗಿದೆ' ಎನ್ನುತ್ತಾರೆ ಬೆಳೆಗಾರ ವಸಂತ ಗೌಡ.
ಶಿರಸಿ ಮಾತ್ರವಲ್ಲದೆ ಸುತ್ತಮುತ್ತಲಿನ ಸಾಗರ, ಯಲ್ಲಾಪುರ ಜಾತ್ರೆಗಳಿಂದ ಕಲ್ಲಂಗಡಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ವರದಾ ನದಿ ತೀರದ ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆದ ಇಲ್ಲಿನ ಹಣ್ಣುಗಳು ಹೆಚ್ಚು ಸಿಹಿಯಾಗಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ' ಎನ್ನುತ್ತಾರೆ ಅವರು.
ಈ ಬಾರಿ ಶಿರಸಿ ಸಾಗರ ಯಲ್ಲಾಪುರ ಜಾತ್ರೆ ಇದ್ದ ಕಾರಣ ಅಧಿಕ ಬೇಡಿಕೆಯ ನಿರೀಕ್ಷೆ ಇತ್ತು. ಉತ್ತಮ ದರ ಕೂಡ ಸಿಗುವ ಆಸೆ ಇತ್ತು ಅದರಂತೆ ಆಗಿದೆಶಿವಕುಮಾರ ಆರೇರ, ಬನವಾಸಿ ಭಾಗದ ಕಲ್ಲಂಗಡಿ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.