ಶಿರಸಿಯ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಜತೆ ನದಿ ಜೋಡಣೆ ಕೈಬಿಡುವ ವಿಚಾರವಾಗಿ ಮಾತನಾಡಿದರು
ಶಿರಸಿ: ‘ಪಶ್ಚಿಮಘಟ್ಟದಲ್ಲಿ ನದಿ ತಿರುವು ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ ಅವರಿಗೆ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಮನವಿ ನೀಡಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಸ್ವರ್ಣವಲ್ಲೀ ಶ್ರೀಗಳ ದರ್ಶನ ಪಡೆದ ಸಂದರ್ಭದಲ್ಲಿ ಮನವಿ ನೀಡಲಾಗಿದೆ.
‘ನಮ್ಮ ನದಿಗಳಲ್ಲಿ ನೀರಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಯಾವುದೂ ಇಲ್ಲ. ಕರಾವಳಿ ಮೀನುಗಾರರಿಗೆ ನದಿಯ ಸಿಹಿ ನೀರು ಬರದಿದ್ದರೆ ಬದುಕಿಲ್ಲ. ಅರಣ್ಯ ನಾಶ ಭೂಕುಸಿತ ಪಶ್ಚಿಮ ಘಟ್ಟದಲ್ಲಿಹೆಚ್ಚಾಗಿದೆ. ಆದ್ದರಿಂದ ನೀರಿಲ್ಲದ ಬೇಡ್ತಿ ಅಘನಾಶಿನಿ ನದಿಗಳಿಗೆ ಹೊಸ ನೀರಾವರಿ ಯೋಜನೆ ಜಾರಿ ಬೇಡ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಚಿವರಿಗೆ ಕಿವಿ ಮಾತು ಹೇಳಿದರು.
ಇದಕ್ಕೆ ಪ್ರಕ್ರಿಯಿಸಿರುವ ಸಚಿವ ವಿ. ಸೋಮಣ್ಣ, ‘ಜಲಶಕ್ತಿ ಇಲಾಖೆ ಉನ್ನತ ಅಧಿಕಾರಿಗಳ ಜತೆ ಹಾಗೂ ರಾಜ್ಯ ಸರ್ಕಾರದ ಜತೆ ಮಾತನಾಡಿ ಈ ಬೇಡಿಕೆ ಪರಿಶೀಲಿಸುತ್ತೇನೆ. ಪರಿಸರ, ಅರಣ್ಯ ರಕ್ಷಣೆ ಬಗ್ಗೆ ಕಾಳಜಿ ಇದೆ. ದೇಶದ ಅಭಿವೃದ್ಧಿಯೂ ಮುಖ್ಯ’ ಎಂದು ತಿಳಿಸಿದ್ದಾಗಿ ಅಶೀಸರ ಮಾಹಿತಿ ನೀಡಿದ್ದಾರೆ.
ಈ ವೇಳೆ ಪ್ರಮುಖರಾದ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಹರಿಪ್ರಕಾಶ ಕೋಣೆಮನೆ, ರಾಘವೇಂದ್ರ ಭಟ್
ಹಾಸಣಗಿ, ನಾರಾಯಣ ಗಡಿಕೈ, ಎಸ್.ಎಂ. ಹೆಗಡೆ ಬಣಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.