ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಪಟ್ಟಣ ಪಂಚಾಯಿತಿಯಿಂದ ವಿವಿಧ ವಾರ್ಡ್‌ಗಳಲ್ಲಿ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿ, ಹಂದಿಗಳನ್ನು ಸೆರೆ ಹಿಡಿಯಲಾಯಿತು. ಈ ವೇಳೆ ಹಂದಿ ಸಾಕಣೆದಾರರು ಆಕ್ಷೇಪ ವ್ಯಕ್ತಪಡಿಸಿದರು
‘ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಸೂಚಿಸಿದರೂ ಹಂದಿ ಸಾಕಣಿದಾರರು ಸೂಕ್ತವಾಗಿ ಸ್ಪಂದಿಸಿಲ್ಲ. ಅನಿವಾರ್ಯವಾಗಿ, ಟೆಂಡರ್ ಕರೆದು ಹಂದಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳಿದರು. ಆದರೆ, ಇದಕ್ಕೆ ಒಪ್ಪದ ಹಂದಿ ಸಾಕಣೆದಾರರು, ‘ಇನ್ನಷ್ಟು ದಿನಗಳು ಅವಕಾಶ ನೀಡಬೇಕು. ಬೇರೆಯವರು ಹಿಡಿಯಲು ಅವಕಾಶ ಕೊಡಬೇಡಿ’ ಎಂದು ಮನವಿ ಮಾಡಿದರು.
‘ಪಟ್ಟಣದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಹಂದಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗಿದೆ. ಹಂದಿಗಳ ಹಾವಳಿ ನಿಯಂತ್ರಣಕ್ಕೆ ಬರುವರೆಗೂ ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.