ADVERTISEMENT

ಶಿರಸಿ: ನಾಡಿನ ಗಮನಸೆಳೆದ ‘ಯಕ್ಷ ಕಲಾಸಂಗಮ’

ಮಹಿಳಾ ಯಕ್ಷಗಾನ ಕಲಾವಿದರು ಸೇರಿ ಕಟ್ಟಿಕೊಂಡ ಸಂಘಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 21:45 IST
Last Updated 18 ಫೆಬ್ರುವರಿ 2023, 21:45 IST
ಶಿರಸಿಯ ಯಕ್ಷಕಲಾ ಸಂಗಮದ ಕಲಾವಿದೆಯಿಂದ ಯಕ್ಷ ನೃತ್ಯ ಪ್ರದರ್ಶನ...
ಶಿರಸಿಯ ಯಕ್ಷಕಲಾ ಸಂಗಮದ ಕಲಾವಿದೆಯಿಂದ ಯಕ್ಷ ನೃತ್ಯ ಪ್ರದರ್ಶನ...   

ಶಿರಸಿ: ತಾಲ್ಲೂಕಿನ ಗಡಿಗೆಹೊಳೆ ಅಚ್ಚ ಹಸುರಿನ ತೋಟಪಟ್ಟಿಯ ಹಳ್ಳಿ. ಇಂಥ ಪರಿಸರದಲ್ಲಿ ಹುಟ್ಟಿದ ‘ಯಕ್ಷ ಕಲಾಸಂಗಮ’ ಎಂಬ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕೇಂದ್ರವು ಗ್ರಾಮೀಣ ಭಾಗದ ಮಹಿಳೆಯರನ್ನು ಯಕ್ಷಗಾನ ಕಲೆಯಲ್ಲಿ ಪಳಗಿಸಿ ನಾಡಿನ ಗಮನಸೆಳೆಯುತ್ತಿದೆ.

ಯಕ್ಷಗಾನ ಕಲಾವಿದ ಸುಬ್ರಾಯ ಭಟ್ ಗಡಿಗೆಹೊಳೆ ಇಲ್ಲಿನ ಮಹಿಳೆಯರಿಗೆ ಯಕ್ಷಗಾನ ಕಲೆಯೆಡೆಗಿನ ಆಸಕ್ತಿ ಗಮನಿಸಿದ್ದರು. ಬಳಿಕ ಅವರಿಗೆ ತರಬೇತಿ ನೀಡಿ, ಸೂಕ್ತ ಮಾರ್ಗದರ್ಶನ ಒದಗಿಸಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ಸುಮಾ ಹೆಗಡೆ, ಯಕ್ಷ ಕಲಾಸಂಗಮ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕೇಂದ್ರ ಸ್ಥಾಪಿಸುವ ಮೂಲಕ ಯಕ್ಷಗಾನದಲ್ಲಿ ಇನ್ನಷ್ಟು ಮಹಿಳೆಯರು, ಮಕ್ಕಳು ತೊಡಗುವಂತೆ ಮಾಡಿದ್ದಾರೆ.

‘ಯಕ್ಷಗಾನಕ್ಕೆ ಸಂಬಂಧಿಸಿ ಸಮಾಜ ಸೇವೆ ಪ್ರಾರಂಭವಾಯಿತು. ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರ ನಡೆಸಲಾಯಿತು. ಆಸಕ್ತ ಮಹಿಳೆಯರಿಗೆ ಯಕ್ಷಗಾನ ತಾಳಮದ್ದಳೆಯ ತರಬೇತಿ ಪ್ರಾರಂಭವಾಯಿತು. ಜತೆಗೆ ಆಸ್ಪತ್ರೆಯ ನರ್ಸ್‌ಗಳಿಗೂ ಯಕ್ಷಗಾನ ತರಬೇತಿ ನೀಡಿದ್ದು ವಿಶೇಷ ಸಂಗತಿ’ ಎನ್ನುತ್ತಾರೆ ಯಕ್ಷ ಕಲಾ ಸಂಗಮದ ಸುಮಾ ಗಡಿಗೆಹೊಳೆ.

ADVERTISEMENT

‘2005ರಲ್ಲಿ ಯಕ್ಷಪಯಣ ಪ್ರಾರಂಭವಾಯಿತು. ಸುಬ್ರಾಯ ಭಟ್ಟರ ಪ್ರೋತ್ಸಾಹದೊಂದಿಗೆ ಕೌವಾಳೆ ಗಣಪತಿ ಭಾಗವತರ ಮಾರ್ಗದರ್ಶನದಲ್ಲಿ ದೇಶದ ಹಲವೆಡೆ 400ಕ್ಕೂ ಅಧಿಕ ಕಾರ್ಯಕ್ರಮ ಪ್ರದರ್ಶಿಸಿದ್ದೇವೆ. ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಏನು ಕೊಡಬಹುದು ಎಂಬ ನೆಲೆಯಲ್ಲಿ ಹುಟ್ಟಿದ ಸಂಸ್ಥೆ ಅಡಿಯಲ್ಲಿ ಇದೀಗ ಐವತ್ತಕ್ಕೂ ಹೆಚ್ಚು ಶಿಷ್ಯರು ಪಳಗಿದ್ದಾರೆ. ಬಿಡುವಿನ ವೇಳೆ ಕಲಾ ಸೇವೆಯಲ್ಲಿ ತೊಡಗಿದ್ದಾರೆ’ ಎಂದರು.

‘ಕೇವಲ ರಾಜ್ಯವಷ್ಟೆ ಅಲ್ಲದೆ ಹೊರರಾಜ್ಯಗಳಲ್ಲೂ ಯಕ್ಷಗಾನ ಕಲೆ ಪ್ರದರ್ಶಿಸಿದ್ದೇವೆ. ಈ ಮೂಲಕ ಹೊರನಾಡಿಗೂ ನಮ್ಮ ನಾಡಿನ ಕಲಾಪ್ರಕಾರ ಪರಿಚಯಿಸುವ ಪ್ರಯತ್ನ ನಡೆದಿದೆ. ಕೆಲವು ಕಡೆಗಳಲ್ಲಿ ಮಹಿಳೆಯರೇ ಕಲಾ ತಂಡ ಕಟ್ಟಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿರುವುದಕ್ಕೆ ಜನ ಚಕಿತರೂ ಆಗಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಮುಂಬೈನಲ್ಲಿ ಪ್ರದರ್ಶನ ಇಂದು

ಮುಂಬೈನ ಹವ್ಯಕ ವೆಲ್ಫೇರ್ ಟ್ರಸ್ಟ್ ಫೆ.19ರಂದು ಆಯೋಜಿಸಿರುವ ಕರ್ಕಿ ವೆಂಕಟ್ರಮಣ ಶಾಸ್ತ್ರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಕಲಾ ಸಂಗಮ ತಂಡ ರಾವಣ ಅವಸಾನ ಯಕ್ಷಗಾನ ಪ್ರದರ್ಶನ ನೀಡಲಿದೆ. ಮುಮ್ಮೇಳದಲ್ಲಿ ಸುಮಾ ಗಡಿಗೆಹೊಳೆ, ಸಹನಾ ಜೋಶಿ, ಪ್ರೇಮಾ ಭಟ್, ಶೈಲಾ ದೊಡ್ಡೂರು, ಜ್ಯೋತಿ ಹೆಗಡೆ, ಸುನಂದಾ ಹೆಗಡೆ, ತನ್ಮಯ ಹೆಗಡೆ ಭಾಗವಹಿಸಲಿದ್ದರೆ, ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮೃದಂಗದಲ್ಲಿ ಕೃಷ್ಣ ಹೆಗಡೆ, ಚಂಡೆಯಲ್ಲಿ ಪ್ರಶಾಂತ ಕೈಗಡಿ ಪಾಲ್ಗೊಳ್ಳಲಿದ್ದಾರೆ.

------------------

ಯಕ್ಷಗಾನ ನಮ್ಮ ನಾಡಿನ ಜೀವಂತಿಕೆಯ ಕಲೆ. ಸಂಸ್ಕಾರಯುತ ವ್ಯಕ್ತಿತ್ವ ರೂಪಿಸಿಕೊಳ್ಳಲು ಇದು ನೆರವಾಗುತ್ತದೆ.

ಸುಮಾ ಹೆಗಡೆ ಗಡಿಗೆಹೊಳೆ

ಯಕ್ಷಗಾನ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.