ADVERTISEMENT

‘ಮೂಲಕ್ಕೆ ಚ್ಯತಿಯಾಗದಂತೆ ಹೊಸ ಪ್ರಯೋಗ ನಡೆಯಲಿ’

ಎರಡು ದಿನಗಳ ಮಹಿಳಾ ಯಕ್ಷ ಸಂಭ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 12:45 IST
Last Updated 6 ಫೆಬ್ರುವರಿ 2020, 12:45 IST
ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಅವರು ‘ನೆಬ್ಬೂರ ನಾರಾಯಣ ಭಾಗವತ’ರ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು (ಎಡದಿಂದ ಆರನೆಯವರು). ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ
ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಅವರು ‘ನೆಬ್ಬೂರ ನಾರಾಯಣ ಭಾಗವತ’ರ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು (ಎಡದಿಂದ ಆರನೆಯವರು). ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ   

ಶಿರಸಿ: ಯಕ್ಷಗಾನದ ಮೂಲ ಆಶಯಕ್ಕೆ ಚ್ಯುತಿ ಬರದಂತೆ ಹೊಸ ಪ್ರಯೋಗಗಳನ್ನು ನಡೆಸುವ ಮೂಲಕ ಯುವ ತಲೆಮಾರನ್ನು ಈ ಕಲೆಯೆಡೆಗೆ ಸೆಳೆಯಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷ ಗೆಜ್ಜೆ ಸಂಘಟನೆಯ ಸಹಯೋಗದಲ್ಲಿ ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಗುರುವಾರದಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಮಹಿಳಾ ಯಕ್ಷ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನವು ಪರಿಪೂರ್ಣ ಕಲೆಯಾಗಿದೆ. ಸಂಸ್ಕೃತಿಯನ್ನು ಪರಿಚಯಿಸುವ ಅಗಾಧ ಶಕ್ತಿ ಈ ಕಲೆಗಿದೆ. ಮೇಲ್ನೋಟಕ್ಕೆ ಮನರಂಜನೆಯಾಗಿ ಕಂಡರೂ ಭಾರತೀಯ ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ತಿಳಿಸುವ ಕಲೆ ಇದಾಗಿದೆ. ಈ ಕಲೆಯ ಒಲವಿದ್ದ ಹಿರಿಯರು, ಕಲೆಯ ಉನ್ನತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡ ರೀತಿ ಮಾದರಿಯಾಗಿದೆ ಎಂದರು.

ADVERTISEMENT

ಅಕಾಡೆಮಿಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು. ಮಹಿಳೆಯರು ಯಕ್ಷಗಾನ ಕ್ಷೇತ್ರಕ್ಕೆ ಹೆಚ್ಚು ಬರುತ್ತಿರುವುದು ಖುಷಿಯ ಸಂಗತಿ. ಮಹಿಳೆಯರ ನಡುವೆ ಯಕ್ಷ ಅಭಿರುಚಿ ಬೆಳೆದರೆ, ಆ ಮೂಲಕ ಮನೆಯ ಮಕ್ಕಳಿಗೆ ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಹೇಳಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕರಾವಳಿಯ ಕಲೆ ಎಂಬ ತಪ್ಪು ತಿಳಿವಳಿಕೆ ಕೆಲವರಲ್ಲಿದೆ. ಆದರೆ, ರಾಜ್ಯದ 22ರಷ್ಟು ಜಿಲ್ಲೆಗಳಲ್ಲಿ ಯಕ್ಷಗಾನದ ವಿವಿಧ ಪ್ರಕಾರಗಳು ಇಂದಿಗೂ ಜೀವಂತವಾಗಿವೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಪ್ರಾದೇಶಿಕ ಭಿನ್ನತೆ ಇದ್ದರೂ ಮೂಲ ರೂಪದಲ್ಲಿ ಇವು ಒಂದೇ ಆಗಿವೆ ಎಂದರು.

ಇದೇ ವೇಳೆ ದಿವಂಗತ ನೆಬ್ಬೂರು ನಾರಾಯಣ ಭಾಗವತರ ಸಾಕ್ಷ್ಯಚಿತ್ರ, ಜಿ.ಎಂ.ಭಟ್ ಕೆವಿ ಅವರ ‘ಪಂಚಧ್ರುಮ’ ಹಾಗೂ ಇಟಗಿ ಮಹಾಬಲೇಶ್ವರ ಭಟ್ಟರ ‘ಇಟಗಿಯವರ ಯಕ್ಷಗಾನ ಪ್ರಸಂಗಗಳು’ ಕೃತಿ ಬಿಡುಗಡೆಗೊಳಿಸಲಾಯಿತು. ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಇದ್ದರು.

ಅಕಾಡೆಮಿ ರಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಸ್ವಾಗತಿಸಿದರು. ಸತೀಶ ಹೆಗಡೆ ಗೋಳಿಕೊಪ್ಪ ನಿರೂಪಿಸಿದರು. ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ವಂದಿಸಿದರು.

ನಂತರ ನಡೆದ ವಿಚಾರ ಸಂಕಿರಣದಲ್ಲಿ ‘ಉತ್ತರ ಕನ್ನಡದ ಬಡಗು’ ಕುರಿತು ವಿಜಯನಳಿನಿ ರಮೇಶ, ‘ತೆಂಕುತಿಟ್ಟು ಯಕ್ಷಗಾನ ಮತ್ತು ಮಹಿಳೆಯರು’ ಕುರಿತು ಸುಮಂಗಲಾ ರತ್ನಾಕರ, ‘ಮೂಡಲಪಾಯ ಯಕ್ಷಗಾನ’ ಕಯರಿತು ಸುಜಾತಾ ಅಕ್ಕಿ ವಿಚಾರ ಮಂಡಿಸಿದರು. ಮೂಡಲಪಾಯ ಗೊಂಬೆಯಾಟ, ಯಕ್ಷಗಾನ ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.