ಹೊನ್ನಾವರ: ಒಂದೆಡೆ ಮಲೆನಾಡು, ಇನ್ನೊಂದೆಡೆ ಕರಾವಳಿ ಪ್ರದೇಶ ಒಳಗೊಂಡ ತಾಲ್ಲೂಕಿನಲ್ಲಿ ನೀರಿನ ವಿಚಾರದಲ್ಲೂ ವಿಭಿನ್ನತೆ ಇದೆ. ಕೆಲವೆಡೆ ನೀರು ಹೇರಳವಾಗಿದ್ದರೆ ಉಳಿದೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.
ನೂರಾರು ಕೋಟಿ ವೆಚ್ಚದ ಶರಾವತಿ ಕುಡಿಯುವ ನೀರಿನ ಯೋಜನೆ ನಿರೀಕ್ಷಿತ ಫಲ ನೀಡಿಲ್ಲ. ಪಟ್ಟಣದ ನಲ್ಲಿಗಳಲ್ಲಿ ಶರಾವತಿ ನದಿಯ ನೀರು ಬಂದಿದೆಯಾದರೂ ಯೋಜನೆಯ ಷರತ್ತುಗಳನ್ವಯ ಗ್ರಾಮಗಳಿಗೆ ನೀರು ಪೂರೈಕೆ ಇನ್ನೂ ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆ ನಂತರ ಜಲಜೀವನ್ ಮೊಷನ್ (ಜೆಜೆಎಂ) ಕಾಮಗಾರಿ ವೇಗವನ್ನು ಕಳೆದುಕೊಂಡಿದೆ ಎಂಬುದು ಜನರ ಆರೋಪ.
‘ತಾಂತ್ರಿಕ ಕಾರಣ, ತಕರಾರು ಸೇರಿದಂತೆ ಬೇರೆ ಬೇರೆ ಕಾರಣದಿಂದ ಜೆಜೆಎಂ ಅಡಿ ಕೈಗೆತ್ತಿಕೊಂಡ 54 ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅರಣ್ಯ ಅತಿಕ್ರಮಣ ಜಾಗ ಸೇರಿದಂತೆ ಎಲ್ಲೆಂದರಲ್ಲಿ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿರುವ ಜೊತೆಗೆ ನದಿಗಳಿಂದ ಅನಧಿಕೃತವಾಗಿ ನೀರನ್ನು ಬೇರೆಡೆ ಸಾಗಿಸುತ್ತಿರುವ ಹಲವು ದೂರುಗಳಿವೆ. 10 ಅಶ್ವಶಕ್ತಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಶುಲ್ಕ ಇಲ್ಲದಿರುವುದರಿಂದ ನದಿಗಳಿಗೆ ಹಾಗೂ ಕೊಳವೆಬಾವಿಗಳಿಗೆ ಅಳವಡಿಸಿರುವ ಪಂಪ್‌ಗಳು ದಿನವಿಡೀ ಕಾರ್ಯನಿರ್ವಹಿಸುತ್ತಿದ್ದು, ಭೂಮಿ ಹಾಗೂ ನದಿಯ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿರುವ ಜೊತೆಗೆ ನದಿಗಳಲ್ಲಿ ನೀರಿನ ಹರಿವಿನ ವೇಗ ಕಡಿಮೆಯಾಗಿ ಸಮುದ್ರದ ನೀರು ಬಹು ದೂರದವರೆಗೆ ನದಿಗೆ ನುಗ್ಗುತ್ತಿವೆ ಹಾಗೂ ಕುಡಿಯುವ ನೀರಿನ ಮೇಲೂ ಇದರ ದುಷ್ಪರಿಣಾಮ ಉಂಟಾಗಿದೆ ಎಂಬ ಅಸಮಾಧಾನದ ಮಾತುಗಳು ಜನರಿಂದ ಕೇಳಿ ಬರುತ್ತಿವೆ.
ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಕೆಲವೆಡೆ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. 20 ಗ್ರಾಮಗಳ 220 ಮಜರೆಗಳಲ್ಲಿ ನೀರಿನ ಸಮಸ್ಯೆ ತಲೆದೋರಬಹುದೆಂದು ತಾಲ್ಲೂಕು ಆಡಳಿತ ಅಂದಾಜಿಸಿದೆ.
‘ಸದ್ಯ ನೀರಿನ ಹಾಹಾಕಾರ ಎಲ್ಲಯೂ ಉಂಟಾಗಿಲ್ಲ. ಮಂಕಿ ಗ್ರಾಮದ ಅನಂತವಾಡಿಯಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
‘ಕೊಳವೆಬಾವಿ ತೆಗೆಯುವ ಕೆಲಸ ಹಲವೆಡೆ ವ್ಯಾಪಕವಾಗಿದೆ. ಇದರ ಪರಿಣಾಮವಾಗಿ ತೆರೆದ ಬಾವಿಗಳ ನೀರಿನ ಪ್ರಮಾಣ ಕಡಿಮೆಯಾಗಿದೆ. ಗ್ರಾಮದ ಒಂದು ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಅಲ್ಲಿ ಮಾತ್ರ ಟ್ಯಾಂಕರ್ ನೀರಿನ ಅಗತ್ಯವಿದೆ’ ಎಂದು ಅನಂತವಾಡಿ ಗ್ರಾಮಸ್ಥೆ ವೈಶಾಲಿ ಹೇಳಿದರು.
ಜೆಜೆಎಂ ಯೋಜನೆಯಡಿ 9 ಗ್ರಾಮಗಳಿಗೆ ನೀರು ಪೂರೈಸಲು ಅಗತ್ಯ ಕಾಮಗಾರಿ ಮುಗಿದಿದೆ. ಆಡಳಿತಾತ್ಮಕ ಸಮಸ್ಯೆಯ ಕಾರಣ ನೀರು ಪೂರೈಕೆ ವಿಳಂಬವಾಗಿದ್ದು ಏ.19ರೊಳಗೆ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆಚೇತನಕುಮಾರ ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.