ADVERTISEMENT

ಅಳಿವೆಯ ಹೂಳಲ್ಲಿ ಸಿಲುಕಿದ ದೋಣಿ: ಕಾರ್ಮಿಕರ ರಕ್ಷಣೆ 

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 15:22 IST
Last Updated 18 ಆಗಸ್ಟ್ 2021, 15:22 IST
ಹೊನ್ನಾವರದ ಕಾಸರಕೋಡ ಟೊಂಕ ಸಮೀಪ ಶರಾವತಿ ಅಳಿವೆಯಲ್ಲಿ ಬುಧವಾರ ಸಿಲುಕಿದ ದೋಣಿ
ಹೊನ್ನಾವರದ ಕಾಸರಕೋಡ ಟೊಂಕ ಸಮೀಪ ಶರಾವತಿ ಅಳಿವೆಯಲ್ಲಿ ಬುಧವಾರ ಸಿಲುಕಿದ ದೋಣಿ   

ಹೊನ್ನಾವರ: ತಾಲ್ಲೂಕಿನ ಕಾಸರಕೋಡ ಸಮೀಪ ಶರಾವತಿ ನದಿ ಅರಬ್ಬಿ ಸಮುದ್ರಕ್ಕೆ ಸೇರುವ ಅಳಿವೆಯ ಹೂಳಲ್ಲಿ ಬುಧವಾರ ಪರ್ಸೀನ್ ದೋಣಿಯೊಂದು ಸಿಲುಕಿ ಹಾನಿ ಸಂಭವಿಸಿದೆ. ಅದರಲ್ಲಿದ್ದ ಕಾರ್ಮಿಕರನ್ನು ರಕ್ಷಿಸಲಾಗಿದೆ.

ಆಳ ಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದ ‘ಎಸ್.ಎಂ.ಪಿ.’ ಹೆಸರಿನ ದೋಣಿಯು ಮೀನುಗಾರಿಕೆ ಮುಗಿಸಿ ವಾಪಸ್ ಬರುವಾಗ ಅವಘಡ ನಡೆಯಿತು. ಹೂಳಿನಲ್ಲಿ ಸಿಲುಕಿದ ದೋಣಿಯ ರಕ್ಷಣೆಗೆ ತಮ್ಮ ದೋಣಿಯೊಂದಿಗೆ ಸ್ಥಳೀಯರು ಧಾವಿಸಿದರು. ದುರಂತಕ್ಕೀಡಾದ ದೋಣಿಯನ್ನು ಸಂಜೆಯ ವೇಳೆಗೆ ತೀರಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದರು. ಇನ್‌ಸ್ಪೆಕ್ಟರ್ ಸೀತಾರಾಮ ಹಾಗೂ ಕರಾವಳಿ ಕಾವಲು ಪಡೆಯ ಇತರ ಸಿಬ್ಬಂದಿ ಕಾರ್ಯಾಚರಣೆಗೆ ನೆರವು ನೀಡಿದರು.

‘ಕಾಸರಕೋಡ ಟೊಂಕದಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿಗೆ ಅಗತ್ಯವಾದ ಮರಳನ್ನು ಶರಾವತಿ ನದಿಯಿಂದ ಅಗೆದು ತೆಗೆದು ಮತ್ತೆ ನದಿಯಲ್ಲೇ ಹಾಕಲಾಗುತ್ತಿದೆ. ಇದರಿಂದ ಅಳಿವೆಯ ದಾರಿಯಲ್ಲಿ ಮರಳು ತುಂಬುತ್ತಿರುವ ಜೊತೆಗೆ ನದಿ ನೀರಿನ ಹರಿವಿನಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಅಳಿವೆ ಕಿರಿದಾಗಿರುವ ಜೊತೆಗೆ ಅದರ ಸ್ವರೂಪ ಬದಲಾಗುತ್ತಿದೆ. ಇದರಿಂದ ಇಲ್ಲಿ ದೋಣಿ ದುರಂತ ಸಾಮಾನ್ಯವಾಗಿದೆ. ಬಾಹ್ಯಾಕಾಶ ಸಂಸ್ಥೆಇಸ್ರೊ ನಡೆಸಿದ ಸರ್ವೆ ಕೂಡ ಈ ಬದಲಾವಣೆಯನ್ನು ದಾಖಲಿಸಿದೆ’ ಎಂದು ಪರಿಸರ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.