ADVERTISEMENT

ಬಂಡವಾಳ ಮೌಲ್ಯ ಆಧರಿಸಿ ತೆರಿಗೆ ನಿಗದಿ: ಪ್ರಿಯಾಂಗಾ.ಎಂ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 15:22 IST
Last Updated 16 ಆಗಸ್ಟ್ 2022, 15:22 IST
ಗ್ರಾಮ ಪಂಚಾಯಿತಿಗಳ ಅಸ್ತಿ ತೆರಿಗೆ ನಿಗದಿಪಡಿಸುವ ಸಂಬಂಧ ತಾಲ್ಲೂಕು ಮಟ್ಟದಲ್ಲಿ ತರಬೇತಿ ನೀಡಲು ಆಯ್ಕೆಯಾದವರಿಗೆ ಕಾರವಾರದಲ್ಲಿ ಮಂಗಳವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು
ಗ್ರಾಮ ಪಂಚಾಯಿತಿಗಳ ಅಸ್ತಿ ತೆರಿಗೆ ನಿಗದಿಪಡಿಸುವ ಸಂಬಂಧ ತಾಲ್ಲೂಕು ಮಟ್ಟದಲ್ಲಿ ತರಬೇತಿ ನೀಡಲು ಆಯ್ಕೆಯಾದವರಿಗೆ ಕಾರವಾರದಲ್ಲಿ ಮಂಗಳವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು   

ಕಾರವಾರ: ‘ಸರ್ಕಾರದ ಅಧಿಸೂಚನೆಯಂತೆ ಗ್ರಾಮ ಪಂಚಾಯಿತಿಗಳ ಆಸ್ತಿ ಮೌಲ್ಯಮಾಪನ ನಡೆಯಬೇಕಿದೆ. ಈ ಹಿಂದಿನ ಬಾಡಿಗೆ ಮೌಲ್ಯದ ಬದಲಾಗಿ, ಬಂಡವಾಳ ಮೌಲ್ಯವನ್ನು ಆಧರಿಸಿ ಮೌಲ್ಯಮಾಪನ ಮಾಡಿ ಆಸ್ತಿ ತೆರಿಗೆಯನ್ನು ನಿಗದಿಗೊಳಿಸಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ ಹೇಳಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ, ಗ್ರಾಮ ಪಂಚಾಯಿತಿಗಳ ಅಸ್ತಿ ತೆರಿಗೆ ನಿಗದಿಪಡಿಸುವ ಸಂಬಂಧ ತಾಲ್ಲೂಕು ಮಟ್ಟದಲ್ಲಿ ತರಬೇತಿ ನೀಡಲು ಆಯ್ಕೆಯಾದವರಿಗೆ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾಶೀಲ ಸ್ವ ಸಹಾಯ ಗುಂಪಿನ ಸದಸ್ಯರ ಸಹಾಯ ಪಡೆದುಕೊಳ್ಳಲಾಗುವುದು. ಆಸ್ತಿ ಮೌಲ್ಯಮಾಪನವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳು, ಎನ್‌.ಆರ್‌.ಎಲ್‌.ಎಂ ಸಿಬ್ಬಂದಿಯನ್ನು ತರಬೇತಿ ನೀಡಲಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ’ ಎಂದರು.

ADVERTISEMENT

‘ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರಿಗೆ ಕೂಡಲೇ ತರಬೇತಿ ಆಯೋಜಿಸಬೇಕು. ಈ ತಿಂಗಳೊಳಗಾಗಿ ತರಬೇತಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು. ಜಿಲ್ಲಾ ಮಟ್ಟದ ತರಬೇತುದಾರರಾದ ಅಂಕೋಲಾ, ಜೊಯಿಡಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ವೈ.ಸಾವಂತ, ಆನಂದ ಬಡಕುಂದ್ರಿ, ಉದ್ಯೋಗ ಖಾತ್ರಿ ನಿರ್ದೇಶಕರಾದ ಸುನೀಲ್ ಅವರು, ಆಸ್ತಿ ತೆರಿಗೆಯನ್ನು ನಿಗದಿಗೊಳಿಸುವ ಕುರಿತು ತರಬೇತಿ ನೀಡಿದರು.

ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ದಿಲೀಪ್ ಜಕ್ಕಪ್ಪಗೋಳ್, ಸಹಾಯಕ ಕಾರ್ಯದರ್ಶಿ ಜೆ.ಆರ್.ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.