ಶಿರಸಿ: ನಗರಕ್ಕೆ ತಾಗಿಕೊಂಡಿರುವ ಯಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚೆಲ್ಲುವ ನಗರದ ಕಸದ ಸಮಸ್ಯೆ ತೀವ್ರವಾಗಿರುವುದು ಒಂದೆಡೆಯಾದರೆ ಹಳ್ಳಿಗಳಿಗೆ ತೆರಳುವ ರಸ್ತೆಗಳ ದುಸ್ಥಿತಿ ಇನ್ನೊಂದೆಡೆಯಾಗಿದೆ.
ನಗರಸಭೆ ವ್ಯಾಪ್ತಿಯ ನಿಲೇಕಣಿಗೆ ತಾಗಿಕೊಂಡಂತೆ ಯಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಆರಂಭವಾಗುತ್ತದೆ. ನಗರದ ತ್ಯಾಜ್ಯಕ್ಕೆ ಈ ಪ್ರದೇಶ 'ಡಂಪಿಂಗ್ ಯಾರ್ಡ್' ಆದಂತಾಗಿದೆ. ವಾರದ ಮೂರ್ನಾಲ್ಕು ದಿನ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ವಾಹನ ನಗರ ತ್ಯಾಜ್ಯ ಸ್ವಚ್ಛಗೊಳಿಸಿದರೂ ಮತ್ತದೇ ಚಾಳಿ ಮುಂದುವರಿಯುತ್ತಿರುವುದು ಪಂಚಾಯಿತಿ ಸದಸ್ಯರ ತಲೆನೋವಿಗೆ ಕಾರಣವಾಗಿದೆ. ಗ್ರಾಪ ಪಂಚಾಯಿತಿ ವ್ಯಾಪ್ತಿಯ ಮನೆಮನೆ ಕಸ ಸಂಗ್ರಹಕ್ಕೂ ನಗರತ್ಯಾಜ್ಯ ಸಮಸ್ಯೆ ತಂದೊಡ್ಡಿದೆ' ಎಂಬುದು ಪಂಚಾಯಿತಿ ಸದಸ್ಯರ ಆರೋಪವಾಗಿದೆ.
‘ಪಂಚಾಯಿತಿ ವ್ಯಾಪ್ತಿಯಲ್ಲಿ ಕಚ್ಚಾ ರಸ್ತೆ ಸಮಸ್ಯೆ ತೀವ್ರವಾಗಿದೆ. ಗಿಡಮಾವಿನಕಟ್ಟೆ ಪರಿಶಿಷ್ಟ ಜಾತಿ ಕಾಲೊನಿಯ ಜನರು ವರ್ಷಪೂರ್ತಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ. ಉಳಿದಂತೆ ಆರರಿಂದ ಎಂಟು ಗ್ರಾಮಗಳಿಗೆ ಡಾಂಬರು ಇಲ್ಲವೇ ಸಿಮೆಂಟ್ ರಸ್ತೆ ಅವಶ್ಯಕತೆ ಇದೆ. ಇದರ ಜತೆ ಕಲ್ಕುಣಿ ಭಾಗದಲ್ಲಿ ಬೀದಿದೀಪಗಳ ಅವಶ್ಯಕತೆಯಿದೆ’ ಎಂಬುದು ಜನರ ಬೇಡಿಕೆಯಾಗಿದೆ.
‘ಸಹಸ್ರಹಳ್ಳಿಯ 52 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಜಲಜೀವನ್ ಮಿಷನ್ ಅಡಿ ಈವರೆಗೆ ನೀರು ನೀಡುವ ಕಾರ್ಯವಾಗಿಲ್ಲ. ಕಳೆದ ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೇ ಸಾಕಷ್ಟು ಸಮಸ್ಯೆ ಆಗಿತ್ತು. ಆಗ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ನೀಡಲಾಗಿತ್ತು. ಈ ಬಾರಿಯಾದರೂ ಯೋಜನೆ ಸಂಪೂರ್ಣ ಅನುಷ್ಠಾನವಾದರೆ ಅನುಕೂಲ ಆಗುತ್ತದೆ. ಈಗಿರುವ ಟ್ಯಾಂಕ್ ಕೂಡ ಸೋರಿಕೆಯಾಗುತ್ತಿದೆ. ಅದನ್ನು ಸರಿಪಡಿಸುವ ಕೆಲಸ ಕೂಡ ಈವರೆಗೆ ಆಗಿಲ್ಲ’ ಎಂಬುದು ಗ್ರಾಮಸ್ಥರ ಅಭಿಪ್ರಾಯ.
‘ಪಂಚಾಯಿತಿ ವ್ಯಾಪ್ತಿಯಲ್ಲಿ 980 ಮನೆಗಳಿದ್ದು, 3,500ರಷ್ಟು ಜನಸಂಖ್ಯೆ ಇದೆ. ಆದರೆ ಆರೋಗ್ಯ ಹದಗೆಟ್ಟರೆ 22 ಕಿ.ಮೀ. ದೂರದ ಸುಗಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಕಾರಣ ಯಡಳ್ಳಿ ಇಲ್ಲವೇ ಸಮೀಪದ ಕಾನಗೋಡ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದರೆ ಅನುಕೂಲ ಆಗುತ್ತದೆ’ ಎಂಬುದು ಸಾರ್ವಜನಿಕರ ಅಭಿಪ್ರಾಯ ಆಗಿದೆ.
'ಇ–ಸ್ವತ್ತು ಸಮಸ್ಯೆ ಇರುವವರು 98 ಆಸ್ತಿ ಮಾಲೀಕರಿದ್ದಾರೆ. ಅವರಿಂದ ಆಸ್ತಿ ಸೇರಿದಂತೆ ಇತರ ತೆರೆಗೆ ಸಂಗ್ರಹವಾಗುತ್ತಿಲ್ಲ. ಆದರೆ ಪಂಚಾಯಿತಿಯಿಂದ ಎಲ್ಲ ಸೌಲಭ್ಯ ನೀಡಲಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸುವ ಅಗತ್ಯವಿದೆ. ಇ–ಸ್ವತ್ತು ನೀಡಲು ಹಾಗೂ ತೆರಿಗೆ ಸಂಗ್ರಹ ಮಾಡಲು ಸರ್ಕಾರ ಸೂಕ್ತ ಕ್ರಮವಹಿಸುವ ಅಗತ್ಯವಿದೆ. ಹಳ್ಳಿಗರು ಕಚ್ಚಾರಸ್ತೆಯಲ್ಲೇ ಸಂಚರಿಸುವಂತಾಗಿದೆ. ಈ ಕುರಿತು ಶಾಸಕರಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ’ ಎಂದು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ ಹೇಳಿದರು.
‘ಹಲವೆಡೆ ಸೌಲಭ್ಯ ಕಲ್ಪಿಸಲಾಗಿದೆ. ಅನುದಾನ ಕೊರತೆಯ ಕಾರಣ ಅಭಿವೃದ್ಧಿ ನಿಂತ ನೀರಾಗಿದೆ’ ಎನ್ನುತ್ತಾರೆ ಅವರು.
- ಪಂಚಾಯಿತಿ ನಗರಕ್ಕೆ ಸನಿಹವಾಗಿದ್ದರೂ ಹೆಚ್ಚಿನ ಸೌಲಭ್ಯ ಹೊಂದುವಲ್ಲಿ ವಿಫಲವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 15 ಕಿಮೀ ಸರ್ವಋತು ರಸ್ತೆ ಬೇಡಿಕೆಯಿದೆಭಾಸ್ಕರ ಶೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಕುಡಿಯುವ ನೀರಿಗೆ ಸಂಬಂಧಿಸಿ 10 ಕಾಮಗಾರಿಯನ್ನು ಕುಡಿಯುವ ನೀರು ಸರಬರಾಜು ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರು ನೀಡುವ ಅನುದಾನದ ನಂತರ ಸಮಸ್ಯೆ ಬಗೆಹರಿಯಲಿದೆಕಮಲಾಕ್ಷಿ ಪಿಡಿಒ ಯಡಳ್ಳಿ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.