ADVERTISEMENT

ಕಾರವಾರ: ‘ಯಕ್ಷ ಪ್ರಾಚಾರ್ಯ’ಗೆ ರಾಜ್ಯೋತ್ಸವ ಗರಿ

ಯಕ್ಷಗಾನ ಕ್ಷೇತ್ರಕ್ಕೆ ನಾಲ್ಕೂವರೆ ದಶಕಗಳ ಕೊಡುಗೆ ಮನ್ನಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:55 IST
Last Updated 31 ಅಕ್ಟೋಬರ್ 2025, 5:55 IST
ಕೆ.ಪಿ.ಹೆಗಡೆ ಗೋಳಗೋಡು
ಕೆ.ಪಿ.ಹೆಗಡೆ ಗೋಳಗೋಡು   

ಕಾರವಾರ: ಯಕ್ಷಗಾನ ಭಾಗವತರಾಗಿ ಹೆಸರು ಮಾಡಿ, ನೂರಾರು ಕಲಾವಿದರಿಗೆ ತರಬೇತಿ ನೀಡಿ ಅವರನ್ನೂ ನಿಪುಣ ಕಲಾವಿದರನ್ನಾಗಿಸಿ ಪೀಳಿಗೆಯಿಂದ ಪೀಳಿಗೆಗೆ ಕಲೆ ಹಸ್ತಾಂತರಿಸಿದ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ.ಹೆಗಡೆ) ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.

ಸಿದ್ದಾಪುರ ತಾಲ್ಲೂಕು ಗೋಳಗೋಡು ಗ್ರಾಮದವರಾದ ಕೆ.ಪಿ.ಹೆಗಡೆ ಕಳೆದ ನಾಲ್ಕೂವರೆ ದಶಕದಿಂದ ಯಕ್ಷಗಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಅದ್ಭುತ ಕಂಠಸಿರಿಯ ಮೂಲಕ ನಾಡಿನ ಹೆಸರಾಂತ ಭಾಗವತರಾಗಿದ್ದಾರೆ. ಅವರ ಕಂಠಸಿರಿಗೆ, ಕಲಾಸಿರಿಗೆ ಸರ್ಕಾರ ಮನ್ನಣೆ ನೀಡಿದೆ. ನೆಬ್ಬೂರು ನಾರಾಯಣ ಭಾಗವತರ ಬಳಿಕ ಭಾಗವತಿಕೆಗೆ ಒಲಿದು ಬಂದ ಎರಡನೇ ರಾಜ್ಯೋತ್ಸವ ಪ್ರಶಸ್ತಿ ಇದು.

ಪ್ರಸಿದ್ಧ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ ಕೆರಮನೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ ಅವರು ಯಕ್ಷಗಾನ ಪಾತ್ರಕ್ಕೆ ಕಂಠಸಿರಿಯ ಮೆರಗು ನೀಡಿದ ಕೀರ್ತಿ ಕೆ.ಪಿ. ಹೆಗಡೆ ಅವರದ್ದು. ಹೆಗಡೆ ಗರಡಿಯಲ್ಲಿ ಪಳಗಿದ ಸರ್ವೇಶ್ವರ ಹೆಗಡೆ ಮೂರೂರು, ರವೀಂದ್ರ ಭಟ್ ಅಚವೆ, ಪರಮೇಶ್ವರ ನಾಯ್ಕ, ಲಂಬೋದರ ಹೆಗಡೆ, ಸುರೇಶ ಶೆಟ್ಟಿ, ಇನ್ನೂ ಹಲವರು ಭಾಗವತಿಕೆಯಲ್ಲಿ ಹೆಸರು ಗಳಿಸಿದ್ದಾರೆ.

ADVERTISEMENT

‘1977ರಲ್ಲೇ ಮೇಳದ ತಿರುಗಾಟ ಆರಂಭಿಸಿದೆ. ಕೋಟ, ಸಾಲಿಗ್ರಾಮ, ಪೆರ್ಡೂರು, ಮಂದಾರ್ತಿ, ಶಿರಸಿ, ಮೂಲ್ಕಿ ಸೇರಿದಂತೆ ಹಲವು ಯಕ್ಞಗಾನ ಮೇಳಗಳಲ್ಲಿ ಪ್ರಮುಖ ಭಾಗವತನಾಗಿ ಸೇವೆ ಸಲ್ಲಿಸಿದ್ದೇನೆ. 38 ವರ್ಷಗಳ ಕಾಲ ನಿರಂತರವಾಗಿ ಯಕ್ಷಗಾನ ವೇದಿಕೆಯಲ್ಲಿ ಭಾಗವತಿಕೆ ಮಾಡಿದೆ’ ಎನ್ನುತ್ತಾರೆ ಕೆ.ಪಿ.ಹೆಗಡೆ.

‘ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕೆಂಬ ಉತ್ಕಟ ಬಯಕೆಯೊಂದಿಗೆ ಹಂಗಾರಕಟ್ಟೆ, ಮಂದಾರ್ತಿಯ ಯಕ್ಞಗಾನ ಕಲಾಕೇಂದ್ರದಲ್ಲಿ ಹಾಗೂ ಯಶಸ್ಸವಿ ಕಲಾಕೇಂದ್ರದಲ್ಲಿ ಯಕ್ಷಪ್ರಾಚಾರ್ಯನಾಗಿ ಕಾರ್ಯನಿರ್ವಹಿಸಿದೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಾಗವತಿಕೆ ತರಬೇತಿ ನೀಡಿದೆ. ಅವರ ಪೈಕಿ ಹಲವರು ಈ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ’ ಎಂದರು.

ಯಕ್ಷಗಾನ ಕ್ಷೇತ್ರ ಮತ್ತಷ್ಟು ಮೆರಗು ಪಡೆಯಬೇಕು. ಕಲಾವಿದರು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ನನ್ನ ಸೇವೆ ಪರಿಗಣಿಸಿದ ಸರ್ಕಾರಕ್ಕೆ ಚಿರಋಣಿ. ಪ್ರಶಸ್ತಿ ಎಲ್ಲ ಅರ್ಹ ಕಲಾವಿದರಿಗೆ ಸಿಗುತ್ತಿರಲಿ
ಕೆ.ಪಿ.ಹೆಗಡೆ ಗೋಳಗೋಡು ರಾಜ್ಯೋತ್ಸವ ಪುರಸ್ಕೃತ ಕಲಾವಿದ