
ಯಲ್ಲಾಪುರ: ಪಟ್ಟಣದ ಹೊರವಲಯದಲ್ಲಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಅದರ ಮಾಂಸ ಸಂಗ್ರಹಿಸಿದ್ದ ಆರೋಪದಡಿ ಆರು ಮಂದಿ ಆರೋಪಿಗಳನ್ನು ಯಲ್ಲಾಪುರ ಅರಣ್ಯ ವಿಭಾಗದ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಜನಕಲಜಡ್ಡಿಯ ಸತೀಶ ಪರಮೇಶ್ವರ ನಾಯ್ಕ, ಪಟ್ಟಣದ ಉದ್ಯಮ ನಗರದ ರುಸ್ತುಂ ಅಟೇಲಸಾಬ ಬೇಪಾರಿ, ಕಾಳಮ್ಮ ನಗರದ ಶಬ್ಬೀರ ರುಸ್ತಂ ಶೇಖ್, ಮಹಮ್ಮದ ರಫೀಕ ಇಮಾಮಸಾಬ ಯಳ್ಳೂರ, ಕರೀಂ ಖಾದರಸಾಬ ಶೇಖ, ಮಹಮ್ಮದ ಶಫಿ ಖಾದರಸಾಬ ಶೇಖ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಉದ್ಯಮ ನಗರದ ಪ್ರಶಾಂತ ಮಂಜುನಾಥ ನಾಯ್ಕ ಪರಾರಿಯಾಗಿದ್ದಾನೆ.
‘ಖಚಿತ ಮಾಹಿತಿ ಆಧರಿಸಿ ಜನಕಲಜಡ್ಡಿಯಲ್ಲಿರುವ ಸತೀಶ ನಾಯ್ಕ ಮನೆ ಮೇಲೆ ದಾಳಿ ನಡೆಸಿದ ವೇಳೆ ಜಿಂಕೆ ಮಾಂಸ ಪತ್ತೆಯಾಗಿತ್ತು. ಆತನನ್ನು ವಿಚಾರಣೆ ನಡೆಸಿದ ವೇಳೆ ಪ್ರಾಣಿಯನ್ನು ಬೇಟೆ ಆಡಿದ ಮಾಹಿತಿ ಲಭಿಸಿತು. ಓರ್ವ ಆರೋಪಿ ನಾಪತ್ತೆಯಾಗಿದ್ದು ಆತನಿಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ 4.5 ಕೆ.ಜಿ ಜಿಂಕೆ ಮಾಂಸ, ಎರಡು ಕಾರು, ಬೇಟೆಗೆ ಬಳಸಿದ್ದ ಬಂದೂಕು ವಶಕ್ಕೆ ಪಡೆಯಲಾಗಿದೆ. ಡಿಸಿಎಫ್ ಹರ್ಷಾ ಬಾನು ಜಿ.ಪಿ ಮಾರ್ಗದರ್ಶನದಲ್ಲಿ ಯಲ್ಲಾಪುರ ಆರ್.ಎಫ್.ಒ ಎಲ್.ಎ.ಮಠ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.