ADVERTISEMENT

ಯಲ್ಲಾಪುರ: ಬೀಗಾರದಲ್ಲಿ ಮುಂದುವರಿದ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:54 IST
Last Updated 19 ಆಗಸ್ಟ್ 2025, 6:54 IST
   

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಗಾರ ಗ್ರಾಮದ ಶಿವಗುರೂಜಿ ಮನೆ ಹತ್ತಿರ ಮಂಗಳವಾರ ಬೆಳಿಗ್ಗೆ ಅಲ್ಪ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ.

ವಜ್ರಳ್ಳಿ ಮೂಲಕ ತಾರಗಾರ- ಬೀಗಾರ ಮತ್ತು ಬಾಗಿನಕಟ್ಟಾ ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ಕೆಳಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆಯೂ ಕುಸಿಯುವ ಆತಂಕ ಎದುರಾಗಿದೆ.

ಕಳೆದ ನಾಲ್ಕಾರು ವರ್ಷಗಳಿಂದಲೂ ಮಳೆಗಾಲದ ಅವಧಿಯಲ್ಲಿ ಇಲ್ಲಿ ಆಗಾಗ ಮಣ್ಣು ಕುಸಿಯುತ್ತಿದೆ. ಸದ್ಯ ಅಂದಾಜು 6 ಅಡಿಯಷ್ಷು ಉದ್ದಕ್ಕೆ ರಸ್ತೆಯ ಕೆಳಭಾಗದ ಮಣ್ಣು ಕುಸಿದಿದ್ದು ರಸ್ತೆಯ ಕಾಂಕ್ರೀಟ್ ಮಾತ್ರ ಉಳಿದುಕೊಂಡಿದೆ. ಸಂಚಾರ ಅಪಾಯಕಾರಿಯಾಗಿದೆ ಎಂದು ಸ್ಥಳೀಯರಾದ ಶಿವರಾಮ ಗಾಂವ್ಕರ ಹೇಳಿದ್ದಾರೆ.

ADVERTISEMENT

ಮಣ್ಣು ಕುಸಿದ ಸ್ಥಳದ ಸಮೀಪದಲ್ಲಿಯೇ ನೀರಿನ ಝರಿ ಇದ್ದು ಮಳೆಗಾಲದ ಅವಧಿಯಲ್ಲಿ ಅದು ಕಾಲುವೆಯಾಗಿ ಹರಿಯುತ್ತದೆ. ಮಳೆಗಾಲದಲ್ಲಿ ಈ ನೀರಿನ ಹರಿವು ಹೆಚ್ಚಾಗಿ ಮಣ್ಣು ಕುಸಿಯುತ್ತಿದೆ. ಭೂ ಕುಸಿತ ಮುಂದುವರಿದಲ್ಲಿ ತಾತಗಾರ, ಬೀಗಾರ, ಬಾಗಿನಕಟ್ಟಾ ಗ್ರಾಮಗಳ ಸಂಪರ್ಕದ ಕೊಂಡಿ ತಪ್ಪಲಿದೆ. ಭೂ ಕುಸಿತದ ಪರಿಣಾಮ ಈಗಾಗಲೇ ರಸ್ತೆಯನ್ನು ಎರಡು ಬಾರಿ ಬದಲಾಯಿಸಲಾಗಿದ್ದು ಈಗಿರುವ ರಸ್ತೆಯೂ ಕುಸಿದರೆ ಹೊಸ ರಸ್ತೆ ನಿರ್ಮಾಣ ಕಷ್ಟಸಾಧ್ಯ. ರಸ್ತೆಯ ಕೆಳಭಾಗದ ಮನೆಗೂ ಅಪಾಯ ಎದುರಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆ ಕುಸಿತ ತಡೆಯುವ ನಿಟ್ಟಿನಲ್ಲಿ ಶೀಘ್ರವಾಗಿ ಆಡಳಿತ ತಡೆಗೋಡೆ ನಿರ್ಮಿಸಬೇಕು ಎಂಬುದು ಸ್ಥಳೀಯ ನಿವಾಸಿಗಳಾದ ಶಿವರಾಮ ಗಾಂವ್ಕರ ಹಾಗೂ ಗಾಯತ್ರಿ ಗಾಂವ್ಕರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.