ADVERTISEMENT

ಯಲ್ಲಾಪುರ: ಸಿಬ್ಬಂದಿಯೇ ಆಡಳಿತ ನಡೆಸುವುದಾದರೆ ಸದಸ್ಯರು ಯಾಕೆ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:11 IST
Last Updated 30 ಆಗಸ್ಟ್ 2025, 7:11 IST
   

ಯಲ್ಲಾಪುರ: ‘ಪಟ್ಟಣ ಪಂಚಾಯಿತಿ ಕಾಯ೯ ಚಟುವಟಿಕೆಗಳ ಕುರಿತು ಸದಸ್ಯರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ’ ಎಂದು ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಸಿಬ್ಬಂದಿ ತಮಗೆ ಬೇಕಾದಂತೆ ಆಡಳಿತ ನಡೆಸುತಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ಸಭೆಯ ನಡಾವಳಿಗೂ, ಠರಾವಿಗೂ ಸಂಬಂಧವೇ ಇರುವುದಿಲ್ಲ. ಹೀಗಾದರೆ ಸಭೆ ಯಾಕೆ ಮಾಡಬೇಕು’ ಎಂದು ಸದಸ್ಯರು ಪ್ರಶ್ನಿಸಿದರು.

‘ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಾವ೯ಜನಿಕರೊಂದಿಗೆ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಜವಾಬ್ದಾರಿ ಇರುವ ಸಿಬ್ಬಂದಿ ಸಭೆಗೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಎಲ್ಲವನ್ನೂ ಮುಖ್ಯಾಧಿಕಾರಿಗಳೇ ಮಾಡುವುದಾದರೆ ಉಳಿದ ಸಿಬ್ಬಂದಿ ಏಕೆಬೇಕು. ನೀವೇ ಆಡಳಿತ ನಡೆಸುವುದಿದ್ದರೆ ನಾವು ಯಾಕೆ’ ಎಂದು ರಾಧಾಕೃಷ್ಣ ನಾಯ್ಕ ಆಕ್ಷೇಪಿಸಿದರು.

ADVERTISEMENT

ಸೀತಾಪುರ ವಸತಿ ಬಡಾವಣೆ ಸಮೀಪದ ರಾಜಕಾಲುವೆಯಲ್ಲಿ ಹೂಳು ತುಂಬಿ ನೀರಿನ ಹರಿವಿಗೆ ತೊಂದರೆ ಉಂಟಾಗಿದೆ. ಅಲ್ಲಿ ಹೂಳು ತೆಗೆಯಬೇಕು ಎಂಬ ವಿಷಯ ಚಚೆ೯ಗೆ ಬಂದಾಗ ಸತೀಶ ನಾಯ್ಕ, ‘ಕಾಮಗಾರಿ ಮುಗಿಯುವ ಮೊದಲೇ ಬಡಾವಣೆಯ ಹಸ್ತಾಂತರ ನಡೆದಿದೆ. ಹಾಗಾಗಿ ಸೂಕ್ತ ಪರಿಶೀಲನೆ ಮಾಡದೆ ಹಸ್ತಾಂತರ ಮಾಡಿಕೊಂಡ ಮುಖ್ಯಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದಲೇ ಹೂಳು ತೆಗೆಸಲು ಬೇಕಾಗುವ ಹಣ ವಸೂಲು ಮಾಡಬೇಕು’ ಎಂದರು. ಹೀಗೆ ಠರಾವು ಪಾಸು ಮಾಡುವಂತೆ ಅವರು ಪಟ್ಟು ಹಿಡಿದರು.

‘ಪೊಲೀಸ್ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವಂತೆ ಸೂಚಿಸಿದರೂ ಯಾಕೆ ಕರೆಯಲಿಲ್ಲ’ ಎಂದು ಸೈಯ್ಯದ್ ಕೈಸರ್ ಪ್ರಶ್ನಿಸಿದರು.

‘ಮುಂದಿನ ಸಭೆಗೆ ಈ ಇಲಾಖೆಯ ಅಧಿಕಾರಿಗಳನ್ನು ಆಮಂತ್ರಿಸಲಾಗುವುದು’ ಎಂದು ಅಧ್ಯಕ್ಷೆ ನರ್ಮದಾ ನಾಯ್ಕ ಹೇಳಿದರು.

ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಸದಸ್ಯ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಕುಮಾರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.