ADVERTISEMENT

ಕೂರ್ಮಗಡದಿಂದ ಯುವಕನ ಶವ ತೆರವು

ಸಮುದ್ರದಲ್ಲಿ ಗಾಳ ಹಾಕಿದ್ದಾಗ ಅಪ್ಪಳಿಸಿದ ಬೃಹತ್ ಅಲೆಯಿಂದ ನೀರುಪಾಲು

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 16:12 IST
Last Updated 8 ಜುಲೈ 2020, 16:12 IST
ಕಾರವಾರ ಸಮೀಪದ ಕೂರ್ಮಗಡ ನಡುಗಡ್ಡೆಯಲ್ಲಿ ಮೃತಪಟ್ಟ ಯುವಕನ ಶವದ ತೆರವು ಕಾರ್ಯಾಚರಣೆಯಲ್ಲಿ ಬುಧವಾರ ನೌಕಾಪಡೆಯ ಸಿಬ್ಬಂದಿ ನಿರತರಾಗಿರುವುದು
ಕಾರವಾರ ಸಮೀಪದ ಕೂರ್ಮಗಡ ನಡುಗಡ್ಡೆಯಲ್ಲಿ ಮೃತಪಟ್ಟ ಯುವಕನ ಶವದ ತೆರವು ಕಾರ್ಯಾಚರಣೆಯಲ್ಲಿ ಬುಧವಾರ ನೌಕಾಪಡೆಯ ಸಿಬ್ಬಂದಿ ನಿರತರಾಗಿರುವುದು   

ಕಾರವಾರ: ಸಮೀಪದ ಕೂರ್ಮಗಡ ನಡುಗಡ್ಡೆಯ ಬಳಿ ಸಮುದ್ರದಲ್ಲಿ ಬಂಡೆಗಲ್ಲುಗಳ ನಡುವೆ ಸಿಲುಕಿದ್ದ ಯುವಕನ ಶವವನ್ನು ನೌಕಾಪಡೆಯ ಸಿಬ್ಬಂದಿಯ ಸಹಕಾರದೊಂದಿಗೆ ಬುಧವಾರ ದಡಕ್ಕೆ ತರಲಾಯಿತು.

ಕೂರ್ಮಗಡದ ರೆಸಾರ್ಟ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ದೇವಬಾಗದ ಈಶ್ವರ ಮಾಜಾಳಿಕರ್ (23) ಮೃತ ಯುವಕ. ಅವರು ಮಂಗಳವಾರ ನಡುಗಡ್ಡೆಯ ತಳಭಾಗಕ್ಕೆ ಬಂದು ಮೀನು ಹಿಡಿಯಲೆಂದು ಗಾಳ ಹಾಕಿ ಕುಳಿತಿದ್ದರು. ಆಗ ಬೃಹತ್ ಅಲೆಯೊಂದು ಅಪ್ಪಳಿಸಿ ಅವರು ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದರು.

ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ ಅವರ ಶವವನ್ನು ತರಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಜಿಲ್ಲಾಡಳಿತದ ಮೂಲಕ ನೌಕಾಪಡೆಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ನೌಕಾಪಡೆಯ ಅಧಿಕಾರಿಗಳು ‘ಐ.ಎನ್.ಎಸ್ ಕೋಸ್ವಾರಿ’ ಹಡಗಿನಲ್ಲಿ ಮುಳುಗು ತಜ್ಞರನ್ನು ಬುಧವಾರ ನಡುಗಡ್ಡೆಗೆ ಕಳುಹಿಸಿಕೊಟ್ಟಿದ್ದರು. ಯುವಕನ ಶವವು ಭೂಪ್ರದೇಶದಿಂದ ದೂರದಲ್ಲಿರುವ ಬಂಡೆಗಲ್ಲುಗಳ ನಡುವೆ ಸಿಲುಕಿದ್ದರಿಂದ ಕಾರ್ಯಾಚರಣೆಗೆ ಸಾಕಷ್ಟು ಶ್ರಮಿಸಬೇಕಾಯಿತು.

ADVERTISEMENT

ನೌಕಾಪಡೆಯ ಸಿಬ್ಬಂದಿ ಹಡಗಿನಲ್ಲಿದ್ದ ರಕ್ಷಣಾ ದೋಣಿಯನ್ನು ಬಳಸಿ ಹಾಗೂ ಈಜಿಕೊಂಡು ಸಾಗಿ ಮೃತದೇಹವನ್ನು ಹಡಗಿಗೆ ತಂದರು. ಬಳಿಕ ಬಂದರಿನಲ್ಲಿ ಪೊಲೀಸ್ಸಿಬ್ಬಂದಿಗೆ ಹಸ್ತಾಂತರಿಸಿದರು.

ಯುವಕನ ಸಾವಿನ ಬಗ್ಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.