ADVERTISEMENT

ಕಾರವಾರ: ಕೌಶಲ ತರಬೇತಿ ಪಡೆಯಲು ನಿರುತ್ಸಾಹ

ಯುವನಿಧಿಗೆ 5 ಸಾವಿರ, ಯುವನಿಧಿ ಪ್ಲಸ್‌ಗೆ 52 ಮಂದಿಯಷ್ಟೇ ನೋಂದಣಿ

ಗಣಪತಿ ಹೆಗಡೆ
Published 16 ಅಕ್ಟೋಬರ್ 2025, 5:09 IST
Last Updated 16 ಅಕ್ಟೋಬರ್ 2025, 5:09 IST
   

ಕಾರವಾರ: ನಿರುದ್ಯೋಗಿ ಯುವಜನರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರ ‘ಯುವನಿಧಿ’ ಜಾರಿಗೆ ತಂದಾಗ ಅದರ ಫಲ ಪಡೆಯಲು ಇದ್ದ ಆಸಕ್ತಿ, ಕೌಶಲ ತರಬೇತಿ ನೀಡಲು ‘ಯುವನಿಧಿ ಪ್ಲಸ್’ ಸೌಲಭ್ಯ ಪಡೆಯಲು ಜಿಲ್ಲೆಯ ಯುವಜನತೆಯಲ್ಲಿ ಕಾಣಿಸಿಲ್ಲ!

ಯುವನಿಧಿ ಫಲಾನುಭವಿಗಳಿಗೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎರಡು ತಿಂಗಳ ಹಿಂದೆ ಕೌಶಲಾಭಿವೃದ್ಧಿ ತರಬೇತಿಗೆ ‘ಯುವನಿಧಿ ಪ್ಲಸ್’ ಆರಂಭಿಸಿದಾಗ ಜಿಲ್ಲೆಯಲ್ಲಿ 52 ಮಂದಿಯಷ್ಟೇ ಹೆಸರು ನೋಂದಾಯಿಸಿಕೊಂಡಿದ್ದರು.

‘ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ (ಸಿಡಾಕ್) ಮುಂದಾಳತ್ವದಲ್ಲಿ ವಿವಿಧ ತರಬೇತಿ ನೀಡಲು ಇಲಾಖೆಯು ಆನ್‌ಲೈನ್ ಕೌನ್ಸೆಲಿಂಗ್ ನಡೆಸಲು ಮುಂದಾಗಿತ್ತು. ಬ್ಯೂಟಿಷಿಯನ್, ಹೊಲಿಗೆ, ಮೊಬೈಲ್ ದುರಸ್ತಿ, ಕುಶಲ ಕೈಗಾರಿಕೆ ತರಬೇತಿಗಳಿಗೆ ಅವಕಾಶ ಕೋರಿ ಕೆಲವೇ ಮಂದಿ ನೋಂದಾಯಿಸಿಕೊಂಡರು. ಪ್ರತಿ ತರಬೇತಿಗೆ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆ ಎರಡಂಕಿ ದಾಟಲಿಲ್ಲ. ಕನಿಷ್ಠ 30 ಮಂದಿ ನೋಂದಾಯಿಸಿಕೊಳ್ಳದ ಹೊರತು ತರಬೇತಿ ಆರಂಭಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ತರಬೇತಿ ಕೈಬಿಡಲಾಯಿತು’ ಎಂದು ಕೌಶಲಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತಕುಮಾರ ಹಬ್ಬು ತಿಳಿಸಿದರು.

ADVERTISEMENT

‘ಯುವನಿಧಿ ಪ್ಲಸ್ ಬಳಿಕ ರಾಜ್ಯ ಸರ್ಕಾರ ಆಯಾ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ವೃತ್ತಿಪರ ತರಬೇತಿ ಒದಗಿಸಲು ನಿರ್ಧರಿಸಿದೆ. ತರಬೇತಿ ಒದಗಿಸುವ ಜೊತೆಗೆ ಆ ಬಳಿಕ ಉದ್ಯೋಗ ಒದಗಿಸಬಹುದಾದ ಕೋರ್ಸ್‌ಗಳನ್ನು ಪರಿಚಯಿಸಲು ಮುಂದಾಗುತ್ತಿದೆ. ಜಿಲ್ಲೆಯ 13 ಐಟಿಐ, ದಾಂಡೇಲಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ತರಬೇತಿ ನೀಡಬಹುದಾದ ಸ್ಥಳಗಳೆಂದು ಗುರುತಿಸಿ ವರದಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಯುವನಿಧಿ ಯೋಜನೆಯಡಿ ಸದ್ಯ 5,968 ಮಂದಿ ಮಾಸಿಕ ಪ್ರೋತ್ಸಾಹಧನ ಪಡೆಯುತ್ತಿದ್ದಾರೆ. ಒಂದೂ ಮುಕ್ಕಾಲು ವರ್ಷದಲ್ಲಿ ₹15.30 ಕೋಟಿ ಮೊತ್ತ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಸರ್ಕಾರ ಕೌಶಲ ತರಬೇತಿಗೆ ವ್ಯವಸ್ಥೆ ಕಲ್ಪಿಸಲು ಮುಂದಾದಾಗ ಫಲಾನುಭವಿಗಳ ಪೈಕಿ ನಿರುತ್ಸಾಹ ತೋರಿದ್ದವರೇ ಹೆಚ್ಚು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಯುವನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ ಒದಗಿಸಲು ಕಡ್ಡಾಯವಾಗಿ ಪ್ರತಿ ಫಲಾನುಭವಿಯೂ ‘ಕೌಶಲಕಾರ್’ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ
ರಜತಕುಮಾರ ಹಬ್ಬು, ಕೌಶಲಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ
‘ಪೂರಕ ತರಬೇತಿ ಒದಗಿಸಲಿ’
‘ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲ. ಸೀಮಿತ ಉದ್ಯೋಗಾವಕಾಶ ಇರುವ ಕಾರಣದಿಂದ ಉದ್ಯೋಗ ಸಿಗುತ್ತಿಲ್ಲ. ಫಲಾನುಭವಿಗಳಿಗೆ ಕೌಶಲ ತರಬೇತಿ ನೀಡುವುದಾದರೆ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಕ್ಷೇತ್ರಕ್ಕೆ, ನೌಕಾದಳದಲ್ಲಿ ಉದ್ಯೋಗ ಸಿಗಬಹುದಾದ ಕೋರ್ಸ್ ಪರಿಚಯಿಸಿ ತರಬೇತಿ ನೀಡಲಿ’ ಎಂದು ಯುವನಿಧಿ ಫಲಾನುಭವಿಯೊಬ್ಬರು ಒತ್ತಾಯಿಸಿದರು. ‘ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಿ, ಜಿಲ್ಲೆಯಲ್ಲಿ ಉದ್ಯೋಗ ಪಡೆದವರು ಕಡಿಮೆ. ಪದವಿ, ಡಿಪ್ಲೊಮಾ ಮುಗಿಸಿ ಮಹಾನಗರಗಳಿಗೆ ವಲಸೆ ಹೋಗಲಾಗದ ಸ್ಥಿತಿಯಲ್ಲಿರುವವರಷ್ಟೇ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಅಂತಹವರಿಗೆ ಪೂರಕ ಕೋರ್ಸ್ ಪರಿಚಯಿಸುವ ಬಗ್ಗೆ ಈಚೆಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.