ADVERTISEMENT

ಆಂಬುಲೆನ್ಸ್‌ಗೆ ಚಾಲಕರ ನಿಯೋಜಿಸಲು ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 15:17 IST
Last Updated 17 ಆಗಸ್ಟ್ 2021, 15:17 IST
ಕಾರವಾರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ ಅವರ ಅಧ್ಯಕ್ಷತೆಯಲ್ಲಿ, ಕೋವಿಡ್ 19 ಮತ್ತು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದ (ನ್ಯೂಮೊಕೋಲ್ ಕಾಂಜಿನೇಟ್) ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆಯ ಸಭೆ ನಡೆಯಿತು. ವೈದ್ಯಾಧಿಕಾರಿಗಳಾದ ಡಾ.ಶರದ್ ನಾಯಕ ಹಾಗೂ ಡಾ.ರಮೇಶ ರಾವ್ ಇದ್ದಾರೆ.
ಕಾರವಾರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ ಅವರ ಅಧ್ಯಕ್ಷತೆಯಲ್ಲಿ, ಕೋವಿಡ್ 19 ಮತ್ತು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದ (ನ್ಯೂಮೊಕೋಲ್ ಕಾಂಜಿನೇಟ್) ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆಯ ಸಭೆ ನಡೆಯಿತು. ವೈದ್ಯಾಧಿಕಾರಿಗಳಾದ ಡಾ.ಶರದ್ ನಾಯಕ ಹಾಗೂ ಡಾ.ರಮೇಶ ರಾವ್ ಇದ್ದಾರೆ.   

ಕಾರವಾರ: ‘ಶಾಸಕರ ನಿಧಿಯಿಂದ ಎಲ್ಲ ತಾಲ್ಲೂಕುಗಳಿಗೆ ನೀಡಲಾಗಿರುವ ಆಂಬುಲೆನ್ಸ್‌ಗಳಿಗೆ ತಾತ್ಕಾಲಿಕವಾಗಿಯಾದರೂ ಚಾಲಕರನ್ನು ನಿಯೋಜಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಎಲ್ಲ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ, ಕೋವಿಡ್ 19 ಮತ್ತು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದ (ನ್ಯೂಮೊಕೋಲ್ ಕಾಂಜಿನೇಟ್) ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆಯ ಸಭೆ ನಡೆಸಿ ಅವರು ಮಾತನಾಡಿದರು.

‘ಕೋವಿಡ್ 19ನ ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಆಗಬಹುದೆಂದು ತಜ್ಞರ ಅಭಿಪ್ರಾಯವಿದೆ. ಆದ್ದರಿಂದ ಜಿಲ್ಲೆಯಲ್ಲಿರುವ ಮಕ್ಕಳ, ಗರ್ಭಿಣಿಯರ ಹಾಗೂ ಬಾಣಂತಿಯರ ಆರೋಗ್ಯದ ಕುರಿತಾಗಿ ವಿಶೇಷ ಗಮನ ವಹಿಸಬೇಕು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ಹೇಳಿದರು.

ADVERTISEMENT

‘ಲಸಿಕಾ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲ ತಾಲ್ಲೂಕುಗಳಲ್ಲಿ ನಡೆಯುವ ಲಸಿಕಾ ಅಭಿಯಾನದ ವಿಡಿಯೊ ಸಾಕ್ಷ್ಯಚಿತ್ರ ಸಿದ್ಧಪಡಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಗ್ರಾಮಗಳು ಮತ್ತು ವಾರ್ಡ್‌ವಾರು ಆರೋಗ್ಯ ಸೇವೆಗಳ ಶಿಬಿರ ನಡೆಸಬೇಕು. ವಲಸೆ ಪ್ರದೇಶಗಳು, ಅಲೆಮಾರಿ ನಿವಾಸಿಗಳಿರುವ ಸ್ಥಳಗಳಿಗೆ ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಬೇಕು. ಅವರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳ ಪಟ್ಟಿ ನೀಡಬೇಕು. ಶಿಬಿರದ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯನ್ನು ನೀಡಿ ಶಿಬಿರವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

‘ಶಿಬಿರದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಗಳಿಗೆ ಗುರುತಿಸಲಾದ ಮಕ್ಕಳನ್ನು ಹತ್ತಿರದ ಉನ್ನತಮಟ್ಟದ ಆಸ್ಪತ್ರೆಗೆ ಅಂದೇ ದಾಖಲು ಮಾಡಬೇಕು. ಇದಕ್ಕಾಗಿ ನಗು– ಮಗು ವಾಹನಗಳನ್ನು ಬಳಸಿಕೊಳ್ಳಿ’ ಎಂದರು.

ನಗರ ಪ್ರದೇಶದ ಅಂಗವಿಕಲರಿಗೆ ಆರೋಗ್ಯ ಕಾರ್ಡ್ ವಿತರಣೆಯಾಗದಿರುವ ಅವರು ಬೇಸರ ವ್ಯಕ್ತಪಡಿಸಿ, ಅ.2ರ ಒಳಗಾಗಿ ಎಲ್ಲ ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ವಿತರಿಸಲು ಸೂಚಿಸಿದರು.

ತಾಲ್ಲೂಕು ವೈದ್ಯಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.