ADVERTISEMENT

ಕೊರೊನಾ ಹೆಸರಿನಲ್ಲಿ ನೀಡುತ್ತಿದ್ದ ಲಸಿಕೆ ಜಪ್ತಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ‘ಆರ್ಸೆನಿಕ್‌ ಆಲ್ಬಾ 30’ ದ್ರಾವಣ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 19:15 IST
Last Updated 15 ಮಾರ್ಚ್ 2020, 19:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ಕೊರೊನಾ ವೈರಸ್‌ ತಡೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮತಿ ಪಡೆಯದೇ ನಗರದ ಪಿಜೆ ಬಡಾವಣೆಯ ಈಶ್ವರಮ್ಮ ಶಾಲೆಯಲ್ಲಿ ಹೋಮಿಯೋಪಥಿ ದ್ರಾವಣವನ್ನು ಜನರಿಗೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭಾನುವಾರ ದ್ರಾವಣವನ್ನು ವಶಪಡಿಸಿಕೊಂಡಿದ್ದಾರೆ.

ಆಯುರ್ವೇದ ವೈದ್ಯರೊಬ್ಬರು ಕೊರೊನಾ ವೈರಸ್‌ ತಡೆಗೆ ಔಷಧ ನೀಡುವುದಾಗಿ ಹೇಳಿ ‘ಆರ್ಸೆನಿಕ್‌ ಆಲ್ಬಾ 30’ ಎಂಬ ದ್ರಾವಣವನ್ನು ಶನಿವಾರ ಜನರಿಗೆ ನೀಡಿದ್ದಾರೆ. ಈ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಮೊಬೈಲ್‌ನಲ್ಲಿ ಹರಿದಾಡಿದ ನಂತರ ಸ್ಥಳಕ್ಕೆ ಡಿಎಚ್‌ಒ, ಆಯುಷ್‌ ಅಧಿಕಾರಿಗಳು, ಸರ್ವೇಕ್ಷಣಾ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿ ₹5 ಸಾವಿರ ಮೌಲ್ಯದ ದ್ರಾವಣವನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಘವೇಂದ್ರಸ್ವಾಮಿ, ‘ಅನುಮತಿ ಇಲ್ಲದೇ ಲಸಿಕೆ ಹಾಕಿರುವ ಕಾರಣ ಕೋವಿಡ್‌ 19 ಎಪಿಡೆಮಿಕ್ ಆಕ್ಟ್‌ ಅಡಿಯಲ್ಲಿ ವೈದ್ಯರು ಹಾಗೂ ಲಸಿಕೆ ಹಾಕಿದ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನಾವು ಯಾರಿಗೂ ಒತ್ತಾಯ ಮಾಡಿ ಲಸಿಕೆ ಹಾಕಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವರಿಗೆ ದ್ರಾವಣ ಹಾಕಿದ್ದೇವೆ. ಇದನ್ನು ಸೇವೆ ರೀತಿಯಲ್ಲಿ ಮಾಡಿದ್ದೇವೆ. ಹಣ ಮಾಡುವ ಉದ್ದೇಶ ನಮಗಿರಲಿಲ್ಲ’ ಎಂದು ಶಾಲೆಯ ಟ್ರಸ್ಟಿ ಜಗನ್ನಾಥ್‌ ಪ್ರತಿಕ್ರಿಯಿಸಿದರು.

‘ಆಯುಷ್‌ ಇಲಾಖೆಯ ಸಲಹಾ ಮಾರ್ಗಸೂಚಿ ಪ್ರಕಾರ ಕೆಮ್ಮು, ಶೀತ ಇದ್ದ ವೇಳೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ದ್ರಾವಣ ಹಾಕಬಹುದು. ಈ ಸಂಬಂಧ ಶಾಲೆಯಲ್ಲಿ 66 ಜನಕ್ಕೆ ಲಸಿಕೆ ಹಾಕಲಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ದೂರು ದಾಖಲು: ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಠಾಣಾಧಿಕಾರಿ, ‘ನ್ಯಾಯಾಲಯದಲ್ಲಿ ದೂರು ದಾಖಲಿಸಿ’ ಎಂದು ಹಿಂಬರಹ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.