ADVERTISEMENT

ಸಂತ್ರಸ್ತರಿಗೆ ಪರಿಹಾರ: ₹ 13 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 15:30 IST
Last Updated 25 ಜನವರಿ 2022, 15:30 IST

ಬೆಂಗಳೂರು: ’ಸಂತ್ರಸ್ತರ ಪರಿಹಾರ ಯೋಜನೆ ಜಾರಿಗಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ₹ 13 ಕೋಟಿ ಬಿಡುಗಡೆ ಮಾಡಲಾಗಿದೆ‘ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.

’ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಸೂಕ್ತ ಮಾರ್ಗಸೂಚಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ‘ಪೀಪಲ್ಸ್ ಮೂವ್‌ಮೆಂಟ್ ಅಗೆನೆಸ್ಟ್ ಸೆಕ್ಷ್ಯುಯಲ್ ಅಸಾಲ್ಟ್’ (ಪಿಎಂಎಎಸ್‌ಎ) ಹೆಸರಿನ ಮಹಿಳಾ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು, ’ಈವರೆಗೂ ಒಟ್ಟು 13 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ಏಳು ಕೋಟಿ ಬಿಡುಗಡೆಗೂ ಸಿದ್ಧವಿದೆ. ಪ್ರಾಧಿಕಾರದಿಂದ ಮನವಿ ಬಂದ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಕೆಎಸ್‌ಎಲ್‌ಎಸ್‌ಎ ಪರ ವಕೀಲರು, ’ಸರ್ಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಸಂತ್ರಸ್ತೆಯರಿಗೆ ಎಷ್ಟು ಪರಿಹಾರ ವಿತರಿಸಲಾಗಿದೆ ಎಂಬ ವಿವರ ಒಳಗೊಂಡ ಮೆಮೊ ಸಲ್ಲಿಸಲಾಗಿದೆ. ಪುನಃ ₹ 15 ಕೋಟಿ ಬಿಡುಗಡೆ ಮಾಡಲು ಇದೇ 10ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಬಾಕಿ ₹ 7 ಕೋಟಿ ಬಿಡುಗಡೆ ಮಾಡುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಹಾಜರು: ಬೆಳಗ್ಗೆ 10.30ಕ್ಕೆ ಕಲಾಪ ಆರಂಭವಾದ ಕೂಡಲೇ ಸರ್ಕಾರಿ ವಕೀಲ ಎಸ್‌. ರಾಜಶೇಖರ್ ಅವರ ಕಚೇರಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಮಂಜುಳಾ ಹಾಜರಾಗಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಮುಂದಿನ ವಿಚಾರಣೆಗೆ ಹಾಜರಾಗುವುದರಿಂದ ಅವರಿಗೆ ವಿನಾಯ್ತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.