ADVERTISEMENT

ವಿಜಯನಗರ–ಬಳ್ಳಾರಿಯಲ್ಲಿ ಭಾರಿ ಮಳೆಗೆ ಇಬ್ಬರ ಸಾವು; 39 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 13:12 IST
Last Updated 2 ಆಗಸ್ಟ್ 2022, 13:12 IST
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿಯಲ್ಲಿ ಮಂಗಳವಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದಿದೆ
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿಯಲ್ಲಿ ಮಂಗಳವಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದಿದೆ   

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಇಬ್ಬರು ಸಾವನ್ನಪ್ಪಿದ್ದು, 39 ಮನೆಗಳಿಗೆ ಹಾನಿಯಾಗಿದೆ.

ಹೊಸಪೇಟೆ ತಾಲ್ಲೂಕಿನ ಜಿ. ನಾಗಲಾಪುರದಲ್ಲಿ ಹಳ್ಳ ದಾಟಿಕೊಂಡು ಹೋಗುವಾಗ ರೈತ ಉಂಚಟ್ಟಿ ಬೊಮ್ಮಪ್ಪ (62) ಕೊಚ್ಚಿಕೊಂಡು ಹೋಗಿದ್ದಾರೆ. ತಡಕಾಲ ಹುಡುಕಾಟದ ನಂತರ ಅವರ ಶವ ಪತ್ತೆಯಾಗಿದೆ. ಬಳಿಕ ಗ್ರಾಮಸ್ಥರು ಪಂಚಾಯಿತಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿ, ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದರು.

ಸಂಡೂರು ತಾಲ್ಲೂಕಿನ ಬೊಮ್ಮಾಘಟ್ಟದ ನಿವಾಸಿ, ಸ್ಮಯೋರ್‌ ಸಂಸ್ಥೆಯ ಉದ್ಯೋಗಿ ಕೃಷ್ಣಕುಮಾರ್‌ (51) ಅವರು ಬೈಕ್‌ನಲ್ಲಿ ಅಂಕಮನಾಳ ಗ್ರಾಮದ ಸಮೀಪದ ಹಳ್ಳ ದಾಟಿಕೊಂಡು ಹೋಗುವಾಗ ಕೊಚ್ಚಿಕೊಂಡು ಹೋಗಿದ್ದಾರೆ. ನಂತರ ಹಳ್ಳದ ಸಮೀಪದ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದೆ.

ADVERTISEMENT

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ 8, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 7, ಕೂಡ್ಲಿಗಿ ಹಾಗೂ ಹರಪನಹಳ್ಳಿ ತಾಲ್ಲೂಕಿನಲ್ಲಿ ತಲಾ 3, ಹೊಸಪೇಟೆ ತಾಲ್ಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿ 7, ಕುರುಗೋಡು ತಾಲ್ಲೂಕಿನ 6, ಕಂಪ್ಲಿ ತಾಲ್ಲೂಕಿನ 3 ಮನೆಗಳಿಗೆ ಹಾನಿ ಉಂಟಾಗಿದೆ. ಎರಡೂ ಜಿಲ್ಲೆಗಳಲ್ಲಿ ಮಂಗಳವಾರ ನಸುಕಿನ ಜಾವ ಐದು ಗಂಟೆಯಿಂದ ಬೆಳಿಗ್ಗೆ 9ಗಂಟೆಯ ವರೆಗೆ ಸುರಿದ ಸತತ ಮಳೆಗೆ ಚೆಕ್‌ ಡ್ಯಾಂ, ಹಳ್ಳ, ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಸಂಡೂರಿನ ನಾರಿಹಳ್ಳ ಜಲಾಶಯದಿಂದ ನೀರು ಹರಿಸಿದ್ದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎರಡೂ ಜಿಲ್ಲೆಯಲ್ಲಿ ಹತ್ತಿ, ಮೆಣಸಿನಕಾಯಿ, ಬಾಳೆ, ಮೆಕ್ಕೆಜೋಳ ಹಾಳಾಗಿದ್ದು, ಸಮೀಕ್ಷೆ ನಂತರ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎನ್ನುವುದು ಗೊತ್ತಾಗಲಿದೆ. ವಿಜಯನಗರ ಜಿಲ್ಲೆಯಲ್ಲಿ ಶಾಲೆ ರಜೆ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.