ADVERTISEMENT

ಆರತಕ್ಷತೆ ಊಟ ಸೇವಿಸಿ 92 ಜನ ಅಸ್ವಸ್ಥ: ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 6:55 IST
Last Updated 28 ಏಪ್ರಿಲ್ 2024, 6:55 IST
   

ಅರಸೀಕೆರೆ (ವಿಜಯನಗರ ಜಿಲ್ಲೆ): ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿಯ ಸಿಂಗ್ರಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಮದುವೆಯ ಆರತಕ್ಷತೆ ಊಟ ಸೇವಿಸಿದ 92 ಜನರು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡವರನ್ನು ದಾವಣಗೆರೆ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಹರಪನಹಳ್ಳಿಯ ಗರ್ಭಗುಡಿ ಗ್ರಾಮದ ವರನ ಮನೆಯಲ್ಲಿ ಮದುವೆ ನೆರವೇರಿತ್ತು. ಶನಿವಾರ ಸಿಂಗ್ರಿಹಳ್ಳಿ ಗ್ರಾಮದ ವಧುವಿನ ಮನೆಯಲ್ಲಿ ಏರ್ಪಡಿಸಿದ್ದ ಮದುವೆ ಆರತಕ್ಷತೆ ಊಟ ಮಾಡಿದವರು ಲಾಡು , ಪಾಯಸ, ಪಲ್ಯ, ಅನ್ನ ಸಾಂಬಾರ್ ಸೇವಿಸಿದ್ದರು. ಊಟ ಸೇವಿಸಿದ ನಂತರ, 10 ಗಂಟೆ ಸುಮಾರಿಗೆ ಹೊಟ್ಟೆ ನೋವು ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ.

ADVERTISEMENT

ತಕ್ಷಣ ಗ್ರಾಮದ ಆಟೋ, ಟ್ರಾಕ್ಟರ್, ಕಾರು, ಬೈಕ್ ಗಳಲ್ಲಿ ಆಗಮಿಸಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್. ಆರ್. ಶಂಕರ್ ನಾಯ್ಕ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

'ಮದುವೆ ಆರತಕ್ಷತೆ ಊಟ ಸೇವಿಸಿದ 92 ಜನರಲ್ಲಿ ವಾಂತಿ, ಭೇದಿ ಶುರುವಾಗಿದೆ. ಅದರಲ್ಲಿ 30 ಮಕ್ಕಳು ಇದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಊಟದ ಪದಾರ್ಥ ಹಾಗೂ ಕುಡಿಯುವ ನೀರನ್ನು ತಪಾಸಣೆಗೆ ಕೊಂಡೊಯ್ಯುತ್ತಿದ್ದು, ವರದಿ ಬಂದ ಬಳಿಕ ಘಟನೆಯ ನಿಖರ ಮಾಹಿತಿ ಬರಲಿದೆ ಎಂದು ಅವರು ಮಾಹಿತಿ ನೀಡಿದರು.

ಹರಪನಹಳ್ಳಿ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿದರು. ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

' ನೂರಕ್ಕೂ ಹೆಚ್ಚು ಊಟ ಸೇವಿಸಿದ್ದು, ಸಿಹಿ ಪದಾರ್ಥ ಸೇವನೆ ಮಾಡಿದವರಲ್ಲಿ ವಾಂತಿ,ಭೇದಿ ಕಾಣಿಸಿಕೊಂಡಿದೆ. ವಧು ಅನ್ನ ಮತ್ತು ಸಾಂಬಾರ್ ಊಟ ಸೇವನೆ ಮಾಡಿದ್ದು ಅವರು ಆರೋಗ್ಯವಾಗಿದ್ದಾರೆ. ಆದರೆ, ಸಿಹಿ ಪದಾರ್ಥ ಜೊತೆಗೆ ಅನ್ನ, ಸಾಂಬಾರ್ ಸೇವನೆ ಮಾಡಿದ್ದ ವರ ಅಸ್ವಸ್ತಗೊಂಡಿದ್ದಾರೆ' ಎಂದು ಅಸ್ವಸ್ತಗೊಂಡು ಚಿಕತ್ಸೆ ಪಡೆಯುತ್ತಿರುವ ಪಕ್ಕಿರ ರಾಜ್ 'ಪ್ರಜಾವಾಣಿ' ಗೆ ಮಾಹಿತಿ ನೀಡಿದರು.

ವಧುವಿನ ಕಡೆಯವರೇ ಅಧಿಕ

ಮದುವೆ ಆರತಕ್ಷತೆ ಕಾರ್ಯಕ್ರಮದ ಊಟ ಸೇವನೆ ಮಾಡಿ ಅಸ್ವಸ್ಥಗೊಂಡ 92 ಜನರಲ್ಲಿ 75 ಜನರು ಸಿಂಗ್ರಿಹಳ್ಳಿ ಗ್ರಾಮದ ವಧುವಿನ ಕುಟುಂಬಸ್ಥರಾಗಿದ್ದಾರೆ. ಉಳಿದ 17 ಜನರು ಹರಪನಹಳ್ಳಿ ಗರ್ಭಗುಡಿಯ ವರನ ಕಡೆಯವರು.

'ಚಿಗಟೇರಿ ಆಸ್ಪತ್ರೆಯಲ್ಲಿ ಸಕಾಲದಲ್ಲಿ ವೈದ್ಯರು ಚಿಕಿತ್ಸೆ ನೀಡಿ, ಸಹಕಾರ ನೀಡುತ್ತಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ' ಎಂದು ಗ್ರಾಮದ ಜಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.