
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.
ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ನಡೆದ ಎಪಿಎಂಸಿ ಆಡಳಿತಾಧಿಕಾರಿ, ರಾಜ್ಯ ರೈತ ಸಂಘದ ಪದಾಧಿಕಾರಿಗಳ ಮತ್ತು ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
‘ಅಧಿಕಾರಿಗಳ ಹಿಡಿತ ಕೈತಪ್ಪಿದೆ, ಸರ್ಕಾರದ ಅನುಮತಿ ಇಲ್ಲದ ವರ್ತಕರು ಹಳ್ಳಿಗಳನ್ನು ಸುತ್ತಿ ರೈತರ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಶೀಘ್ರ ಮೊತ್ತ ಸಿಗಬಹುದು ಆದರೆ, ನಷ್ಟವಾಗುವ ಸಾಧ್ಯತೆಯೇ ಹೆಚ್ಚು’ ಎಂದು ಆರೋಪಿಸಿದರು.
‘ಪರವಾನಗಿ ಇಲ್ಲದ ವರ್ತಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ 50 ಕೆ.ಜಿ. ಚೀಲದ ತೂಕದಲ್ಲಿ ಹೆಚ್ಚುವರಿ ತೂಗುವ 1.3 ಕೆ.ಜಿ. ವಜಾ ಅಷ್ಟೆ ತೆಗೆಯಬೇಕು. ಅದಕ್ಕಿಂತ ಹೆಚ್ಚು ತೆಗೆಯಬಾರದು’ ಎಂದು ಪಟ್ಟು ಹಿಡಿದರು.
ವರ್ತಕರ ಸಂಘದ ಅಧ್ಯಕ್ಷ ಮೃತ್ಯುಂಜಯ ಬದಾಮಿ ಪ್ರತಿಕ್ರಿಯಿಸಿ, ‘ನಮಗೂ ವ್ಯಾಪಾರದಲ್ಲಿ ಅನೇಕ ವೆಚ್ಚಗಳಿರುತ್ತವೆ. ರೈತರು ಉಳಿದರೆ ನಾವು ಉಳಿಯುತ್ತೇವೆ. ದಯವಿಟ್ಟು 1.5 ಕೆ.ಜಿ. ವಜಾ ತೆಗೆಯುವ ಅವಕಾಶ ನೀಡಬೇಕು’ ಎಂದರು. ಈ ಸಂದರ್ಭದಲ್ಲಿ ರೈತರು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು.
ಆಗ ಹೊಸಪೇಟೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಪರಿಸ್ಥಿತಿ ತಿಳಿಗೊಳಿಸಿದರು.
ಜೆ.ಎಂ.ವೀರಸಂಗಯ್ಯ, ‘ತೂಕದಲ್ಲಿ ರಾಜಿ ಇಲ್ಲ, ನಾವು ಹೇಳಿದಂತೆ ವರ್ತಕರು ಸಹಕರಿಸದಿದ್ದರೆ, ಎಪಿಎಂಸಿ ಕಾಯ್ದೆ ಪ್ರಕಾರ ಒಪ್ಪಿಕೊಂಡು ವ್ಯವಹರಿಸಬೇಕು’ ಎಂದು ತಾಕೀತು ಮಾಡಿದರು.
ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ರವಿಕುಮಾರ್ ತಂಬ್ರಹಳ್ಳಿ, ಕೂಡ್ಲಿಗಿಯ ಎನ್.ರಮೇಶ, ಹಡಗಲಿಯ ಹೊಸಮನಿ ಸಿದ್ದೇಪ್ಪ, ಕೊಟ್ಟೂರಿನ ರಮೇಶ್ ನಾಯ್ಕ್ ಮಾತನಾಡಿದರು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ತಹಶೀಲ್ದಾರ್ ಆರ್.ಕವಿತಾ, ಎಪಿಎಂಸಿ ಆಡಳಿತಾಧಿಕಾರಿ ವೀರಣ್ಣ, ಕಾರ್ಯದರ್ಶಿ ಶೈಲಾ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಗೌರವ ಅಧ್ಯಕ್ಷ ಹಲಿಗೇರಿ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.