ADVERTISEMENT

ಹಂಪಿ ಜನರ ಅಹವಾಲು ಆಲಿಸಿದ ಅಡ್ವಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2023, 11:18 IST
Last Updated 7 ಅಕ್ಟೋಬರ್ 2023, 11:18 IST
   

ಹೊಸಪೇಟೆ (ವಿಜಯನಗರ): ರಾಜ್ಯ  ಹೈಕೋರ್ಟ್‌ ಸೂಚನೆಯಂತೆ ಅಡ್ವಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಶನಿವಾರ ಹಂಪಿಯಲ್ಲಿ ಸ್ಥಳೀಯ ಜನರ ಅಹವಾಲು ಆಲಿಸಿದರು. 

ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿ ಇರುವ  ಜನತಾ ಪ್ಲಾಟ್‌ ಪ್ರದೇಶಕ್ಕೆ ತೆರಳಿದ ಅವರು ಸ್ಥಳೀಯ ಜನರ ಕಷ್ಟಗಳನ್ನು ಹಾಗೂ ಮನೆಗಳಿಗೆ ಬೀಗ ಹಾಕಿದ್ದರಿಂದ ಎದುರಾಗಿರುವ ಸಮಸ್ಯೆಗಳನ್ನು ತಿಳಿದುಕೊಂಡರು.

ಬಳಿಕ ಕಡ್ಡಿರಾಂಪುರ, ಆನೆಗುಂದಿಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಅಹವಾಲು ಆಲಿಸಿದರು. ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರು ಸ್ಥಳೀಯರ ಸಮಸ್ಯೆಗಳನ್ನು ವಿವರಿಸಿದರು. 

ADVERTISEMENT

ಭೇಟಿಗೆ ಮೊದಲು ಕಮಲಾಪುರದಲ್ಲಿರುವ ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ಮನವಿ ಸ್ವೀಕರಿಸಿದರು. ಭೇಟಿಯ ಸಮಯದಲ್ಲಿ ವಿರೂಪಾಕ್ಷ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅಡ್ವಕೇಟ್‌ ಜನರಲ್‌ ಅವರು, ತುಂಗಭದ್ರಾ  ನದಿಯಲ್ಲಿನ ಸ್ನಾನಘಟ್ಟಕ್ಕೂ ತೆರಳಿ, ಅಭಿವೃದ್ಧಿ ಯೋಜನೆಗಳ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ  ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಹವಾಮಾ ಆಯುಕ್ತ ನೊಂಗ್ಡಾಯ್‌ ಮೊಹಮ್ಮದ್ ಅಲಿ ಅಕ್ರಮ್‌ ಷಾ ಇತರರು ಇದ್ದರು.

ಭೇಟಿಗೆ ಕಾರಣ ಏನು?:

ಹಂಪಿ ಪರಿಸರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಕೊಟ್ಟೂರು ಶ್ರೀಗಳು ಮತ್ತು ಇತರರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್‌ ಹೋಂಸ್ಟೇಗಳ ತೆರವಿಗೆ ಸೂಚನೆ ನೀಡಿತ್ತು. ಅದರಂತೆ ಇದೇ ಜೂನ್‌ 19ರಂದು ಜನತಾ ಪ್ಲಾಟ್‌  ಪ್ರದೇಶದ 230 ಅಂಗಡಿಗಳಿಗೆ ಮತ್ತು ಹೋಂ ಸ್ಟೇಗಳಿಗೆ ಬೀಗ ಹಾಕಲಾಗಿತ್ತು. ಇದರೊಂದಿಗೆ ಸುತ್ತಮುತ್ತಲಿನ 29 ಗ್ರಾಮಗಳಲ್ಲಿನ ಹಲವು ಅಕ್ರಮ ಹೋಂ ಸ್ಟೇಗಳನ್ನು ಧ್ವಂಸಗೊಳಿಸಲಾಗಿತ್ತು.

ಸ್ಥಳೀಯ ಜನರ ಬದುಕು ಬಹಳ ಕಷ್ಟವಾಗಿದೆ. ಹಂಪಿಗೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಯಾವುದೇ ಸೌಲಭ್ಯ ಸಿಗದಂತಾಗಿದೆ. ಒಂದು ಬಾಟಲು ನೀರಿಗೂ ನಾಲ್ಕು ಕಿ.ಮೀ.ಸಾಗಬೇಕಾಗಿದೆ. ಹೀಗಾಗಿ ಮುಚ್ಚಿಸಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಎಂಬ ಒತ್ತಡ ತೀವ್ರವಾಗಿತ್ತು. ಹಲವು ಹೋರಾಟಗಳೂ ನಡೆದಿದ್ದವು. ಈಚೆಗೆ ವಿ.ಎಸ್‌.ಉಗ್ರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಮುಖ್ಯಮಂತ್ರಿಗಳ  ಗಮನಕ್ಕೆ ತಂದಿದ್ದರು. ಇದೇ 5ರಂದು ಹಂಪಿ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಸ್ಥಳೀಯ ಜನರ ಕಷ್ಟಗಳನ್ನು ಮನವರಿಕೆ ಮಾಡಿತ್ತು. ಹೈಕೋರ್ಟ್‌ ಸಹ ಸ್ಥಳೀಯ ವಸ್ತುಸ್ಥಿತಿಯನ್ನು ತಿಳಿದುಕೊಂಡು ಬಂದು ವರದಿ ಸಲ್ಲಿಸಲು ಅಡ್ವಕೇಟ್ ಜನರಲ್ ಅವರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ  ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.